ತುಂತುರು ಮಳೆ, ಮೋಡ ಕವಿದ ಜಿಲ್ಲೆ

raagi
tubagere raagi
Published on

ಜನಜೀವನ ಅಸ್ತವ್ಯಸ್ತ

ರಾಗಿ ಬೆಳೆಗಾರರಿಗೆ ಆತಂಕ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ವಾಯುಭಾರ ಕುಸಿದ ಪರಿಣಾಮ ಗ್ರಾಮಾಂತರ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿಯಿಂದ ಮಂಗಳವಾರ ಮುಂಜಾನೆವರೆಗೆ ತುಂತುರು ಮಳೆಯಾಗಿದೆ. ಕೆಲವು ಗಂಟೆಗಳ ಕಾಲ ವಿರಾಮ ನೀಡುತ್ತಿದ್ದ ಮಳೆರಾಯ ಮತ್ತೆ ಶುರುವಿಟ್ಟುಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿದೆ.
ಮುಂಜಾನೆಯಿಂದಲೂ ಸೂರ್ಯನ ದರ್ಶನವಿಲ್ಲದೆ, ಮೋಡ ಕವಿದ ವಾತಾವರಣ ಮಧ್ಯೆ ಜಿಟಿಜಿಟಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಜಿಲ್ಲೆಯಿಂದ ಬೆಂಗಳೂರು ಸೇರಿ ವಿವಿಧ ಕಡೆಗೆ ಉದ್ಯೋಗಕ್ಕೆ ಹೊರಡುವ ಜನ ತುಂತುರು ಮಳೆ ನಡುವೆ ಕೊಡೆಗಳನ್ನು ಹಿಡಿದು ಸಾಗುತ್ತಿದ್ದ ದೃಶ್ಯ ಕಂಡುಬಂತು.
ಸರ್ಕಾರಿ ರಜೆ, ಖಾಸಗಿ ಸಜೆ: ಇನ್ನು ಸರ್ಕಾರಿ ಶಾಲೆಗಳಿಗೆ ಅ.20ವರೆಗೆ ದಸರಾ ರಜೆ ಕಾರಣ ಶಾಲಾ ಮಕ್ಕಳು ಮಳೆ ನಡುವೆ ಶಾಲೆಗಳಿಗೆ ಹೋಗುವ ಸಂಕಷ್ಟದಿಂದ ಪಾರಾಗಿದ್ದರೆ, ನಗರ ಪ್ರದೇಶಗಳಲ್ಲಿನ ಬಹುತೇಕ ಖಾಸಗಿ ಶಾಲೆಗಳ ಮಕ್ಕಳು ಕೊಡೆಗಳನ್ನು ಹಿಡಿದು ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ಕಂಡುಬಂತು. ಮಳೆ ಜೋರಾದರೆ ಖಾಸಗಿ ಶಾಲೆಗಳಿಗೆ ರಜೆ ೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಮಳೆ ಕಾರಣದಿಂದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಗಣನೀಯವಾಗಿ ಕಡಿಮೆಯಾಗಿತ್ತು.ದೇವನಹಳ್ಳಿಯ ಜಿಲ್ಲಾಧಿಕಾರಿ ಕಚೇರಿ ಸೇರಿ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಕಂಡುಬಂತು. ಸಾರ್ವಜನಿಕರು ಸಹ ಸರ್ಕಾರಿ ಕಚೇರಿಯತ್ತ ಸುಳಿಯದ ಕಾರಣ ಕಚೇರಿಗಳ ಆವರಣ ಬಣಗುಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಹಳ್ಳಿಗಾಡಿನಲ್ಲಿ ಕೆಸರುಗದ್ದೆ: ಗ್ರಾಮೀಣ ಪ್ರದೇಶಗಳಲ್ಲಿನ ಹಾಳಾದ ರಸ್ತೆಗಳಲ್ಲಿನ ಗುಂಡಿಗಳಲ್ಲಿ ಮಳೆ ನೀರು ಸಂಗ್ರಹಗೊಂಡು ರಸ್ತೆಗಳು ಕೆಸರುಗದ್ದೆಯಂತಾಗಿ ಮಾರ್ಪಾಡಾಗಿದೆ. ರಸ್ತೆ ಗುಂಡಿಗಳನ್ನು ತಪ್ಪಿಸಲು ವಾಹನ ಸವಾರರು ಪರದಾಡುತ್ತಿದ್ದ ದೃಶ್ಯ ಕಂಡುಬಂತು.
ರಾಗಿ ಬೆಳೆಗೆ ಆತಂಕ: ಪ್ರಸ್ತುತ ಸುರಿಯುತ್ತಿರುವ ತುಂತುರು ಮಳೆಯಿಂದ ರಾಗಿ ಬೆಳೆಗೆ ಯಾವುದೇ ಆತಂಕ ಇಲ್ಲ ಎನ್ನುವಂತಿದ್ದರೂ. ಮಳೆ ಹೀಗೆ ಮುಂದುವರೆದರೆ ಅಥವಾ ಜೋರು ಮಳೆ ಸುರಿದರೆ ರಾಗಿ ಬೆಳೆಗೆ ಹಾನಿಯಾಗಲಿದೆ ಎಂಬ ಆತಂಕ ಎದುರಾಗಿದೆ. ರಾಗಿ ತೆನೆಕಟ್ಟುವ ಹಂತದಲ್ಲಿರುವುದರಿಂದ ಸದ್ಯಕ್ಕೆ ತೊಂದರೆಯಿಲ್ಲ ಎನ್ನುವಂತಿದ್ದರೂ ವಾಯುಭಾರ ಕುಸಿತ ವ್ಯತಿರಿಕ್ತ ಪರಿಣಾಮ ಬೀರಲಿದೆಯೇ ಎಂಬ ಆತಂಕ ರೈತಾಪಿ ವಲಯದಲ್ಲಿ ಮನೆ ಮಾಡಿದೆ.
ಕಸ ತೆರವು ಸಂಕಷ್ಟ: ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ದಸರಾ ಆಯುಧಪೂಜೆ ಹಿನ್ನೆಲೆಯಲ್ಲಿ ಸಂಗ್ರಹವಾಗಿರುವ ಕಸದ ರಾಶಿಯನ್ನು ಸಂಪೂರ್ಣ ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ. ಇದರ ನಡುವೆ ತುಂತುರು ಮಳೆಯಿಂದಾಗಿ ಮಳೆನೀರಿನೊಂದಿಗೆ ಕಸಬೆರೆತು ಗಬ್ಬುವಾಸನೆ ಬೀರುತ್ತಿದೆ. ಮಾರುಕಟ್ಟೆಗಳಲ್ಲಿ ಹಬ್ಬದ ವೇಳೆ ಮಾರಾಟವಾಗಿ ಉಳಿದ ಬಾಳೆ ಕಂದು ಹಾಗೂ ಬೂದುಕುಂಬಳಕಾಯಿಗಳ ರಾಶಿ ಹಾಗೆ ಬಿದ್ದಿವೆ. ಕೆಲವು ವ್ಯಾಪಾರಿಗಳು ಬೂದುಕುಂಬಳ ಹಾಗೂ ಇನ್ನಿತರ ತ್ಯಾಜ್ಯವನ್ನು ರಸ್ತೆ ಬದಿಗಳಲ್ಲಿ ಸುರಿದು ಹೋಗಿರುವ ದೃಶ್ಯ ಕಂಡುಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net