

ಮಂಗಳೂರು/ಉಳ್ಳಾಲ/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರ ಮಳೆ ಬಿರುಸು ಪಡೆದಿದೆ. ಜತೆಗೆ ಕಡಲಬ್ಬರವೂ ಹೆಚ್ಚಾಗಿದ್ದು, ಉಳ್ಳಾಲ ಸೋಮೇಶ್ವರದಲ್ಲಿ ಮನೆಯೊಂದು ಸಮುದ್ರಪಾಲಾಗಿದೆ.
ಸೋಮೇಶ್ವರ ಕಡಲ ತೀರದಲ್ಲಿ ಜೀವರಕ್ಷಕರಾಗಿರುವ ದೇವಸ್ಥಾನ ಸಮೀಪದ ನಿವಾಸಿ ಮೋಹನ್ ಎಂಬುವರ ಮನೆ ಕಡಲ್ಕೊರೆತದಿಂದ ಕಳೆದ ವರ್ಷ ಭಾಗಶಃ ಹಾನಿಗೀಡಾಗಿತ್ತು. ಸೋಮವಾರ ಸಾಯಂಕಾಲ ಮನೆ ಸಂಪೂರ್ಣವಾಗಿ ಕಡಲಿಗೆ ಆಹುತಿಯಾಗಿದೆ. ಮೋಹನ್ ಬೇರೆ ಮನೆ ಮಾಡಿದ್ದು, ನೀರುಪಾಲಾದ ಮನೆಯಲ್ಲಿ ಬಾಡಿಗೆಗಿದ್ದ ಕುಟುಂಬ ಬೇರೆಡೆ ಸ್ಥಳಾಂತರಗೊಂಡಿದೆ.
ಉಚ್ಚಿಲದಲ್ಲಿ ಸಮುದ್ರ ಕೊರೆತಕ್ಕೆ ಶಾಶ್ವತ ಕಾಮಗಾರಿ ಆರಂಭಿಸಿದ ಪರಿಣಾಮ ಸೋಮೇಶ್ವರದಲ್ಲಿ ಸಮುದ್ರದ ಅಲೆಗಳ ಅಬ್ಬರ ಜೋರಾಗಿದೆ. ಅನೇಕ ತೆಂಗಿನಮರಗಳ ಸಹಿತ ತೀರ ಪ್ರದೇಶಗಳೂ ಸಮುದ್ರ ಪಾಲಾಗುತ್ತಿವೆ. ಶಾಶ್ವತ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದು ಕಡಲ್ಕೊರೆತ ಹೆಚ್ಚಳಕ್ಕೆ ಕಾರಣ ಎಂಬ ಆರೋಪವಿದೆ. ಉಳ್ಳಾಲದ ಕೈಕೋ, ಕಿಲೇರಿಯಾನಗರ, ಸೀಗ್ರೌಂಡ್ ಬಳಿ ಶಾಶ್ವತ ಕಾಮಗಾರಿ ಆರಂಭಗೊಂಡಿದ್ದರೂ, ಈ ಪ್ರದೇಶಗಳಲ್ಲಿರುವ ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದೆ. ಉಳ್ಳಾಲ ಮತ್ತು ಸೋಮೇಶ್ವರ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ.
ರಸ್ತೆ-ಮನೆಗಳು ಜಲಾವೃತ: ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಹೆದ್ದಾರಿ ಪಕ್ಕದ ಕೊಂಬೆಟ್ಟು ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿ ಎರಡು ಮನೆಗಳು ಜಲಾವೃತಗೊಂಡವು.
ಮಂಗಳೂರು ನಗರದಲ್ಲಿ ಅವೈಜ್ಞಾನಿಕವಾಗಿ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಿದ ಪರಿಣಾಮ ಹಲವೆಡೆ ರಸ್ತೆಗಳು ಜಲಾವೃತವಾಗುತ್ತಿವೆ. ಮಂಗಳವಾರದ ಮಳೆಗೆ ಕೊಟ್ಟಾರದ ಇನ್ಫೋಸಿಸ್ ಬಳಿ ರಸ್ತೆ ಮೇಲೆ ಒಂದು ಅಡಿಯಷ್ಟು ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು.
ಮಳೆ ವಿವರ: ಮಂಗಳೂರು ತಾಲೂಕಿನ ಪಡುಪಣಂಬೂರು ಪ್ರದೇಶದಲ್ಲಿ ದ.ಕ. ಜಿಲ್ಲೆಯಲ್ಲೇ ಅತ್ಯಧಿಕ 62 ಮಿ.ಮೀ. ಮಳೆಯಾಗಿದೆ. ಐಕಳ 59.5, ಕೆಮ್ರಾಲ್ 55, ಮಂಗಳೂರು ನಗರ 15 ಮಿ.ಮೀ. ಮಳೆ ಸುರಿದಿದೆ. ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಯಲ್ಲಿ 51.60 ಮಿ.ಮೀ ಮಳೆಯಾಗಿದೆ.
ಇದೇ ವೇಳೆ ದಿನದ ಗರಿಷ್ಠ ತಾಪಮಾನ 27.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕನಿಷ್ಠ 24.6 ಡಿಗ್ರಿ ಸೆಲ್ಸಿಯಸ್ ಇತ್ತು.
ಬೃಹತ್ ಅಲೆಗಳೇಳುವ ಎಚ್ಚರಿಕೆ: ಸಮುದ್ರ ತೀರ ಪ್ರದೇಶಗಳಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿದ್ದು, ಸಮುದ್ರ ತಟದಲ್ಲಿರುವವರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಹವಾಮಾನ ಇಲಾಖೆ ಕರಾವಳಿಗೆ ಬುಧವಾರವೂ ಯೆಲ್ಲೋ ಆಲರ್ಟ್ ಘೋಷಿಸಿದ್ದು, ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ಗಂಟೆಗೆ 40-45 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ಮಂಗಳೂರಿನಿಂದ ಕಾರವಾರದವರೆಗೆ ಸಮುದ್ರದಲ್ಲಿ 2.7-3.5 ಮೀ. ಎತ್ತರದ ಬೃಹತ್ ಅಲೆಗಳು ಏಳುವ ಸಾಧ್ಯತೆಯಿದ್ದು, 35-55 ಸೆಕೆಂಡ್‌ಗಳ ಅಂತರದಲ್ಲಿ ದಡಕ್ಕೆ ಅಪ್ಪಳಿಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ನೆಲಕ್ಕುರುಳಿದ 55 ವಿದ್ಯುತ್ ಕಂಬಗಳು: ಉಡುಪಿ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಗಾಳಿ ಮಳೆಯಿಂದ 55 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕುಂದಾಪುರ ಮೆಸ್ಕಾಂ ಸಬ್ ಡಿವಿಜನ್ ವ್ಯಾಪ್ತಿಯಲ್ಲಿ 45, ಉಡುಪಿ ವ್ಯಾಪ್ತಿಯಲ್ಲಿ 10 ಕಂಬ, 6 ಟ್ರಾನ್ಸ್‌ಫಾರ್ಮರ್‌ಗೆ ಹಾನಿಯಾಗಿದೆ. 1.01 ಕಿ.ಮೀ. ವಿದ್ಯುತ್ ತಂತಿ ಲೈನ್‌ಗೆ ಹಾನಿಯಾಗಿದ್ದು, ದುರಸ್ತಿ ಕೆಲಸ ನಡೆದಿದೆ.