ಜೂ.14ರಿಂದ ಜಿಲ್ಲೆಯಲ್ಲಿ ತುಂತುರು ಮಳೆಯ ಮುನ್ಸೂಚನೆ: ಭಾರತೀಯ ಹವಾಮಾನ ಇಲಾಖೆ ಮಾಹಿತಿ

Farmer Watching Rain
ಹೆಸರು ಬಿತ್ತನೆ ಮಾಡಿದ ನಿಟ್ಟಾಲಿ ರೈತ ಮೊಡದತ್ತ ಮುಖ ಮಾಡಿರುವುದು.
Published on

ಮಂಡ್ಯ: ಮುಂಗಾರು ನಿರೀಕ್ಷೆಯಲ್ಲಿರುವ ಜಿಲ್ಲೆಯಲ್ಲಿ ಜೂ.14ರಿಂದ 18ರವರೆಗೆ ಮೋಡ ಕವಿದ ವಾತಾವರಣದ ಜತೆಗೆ ತುಂತುರು ಮಳೆ ಬೀಳುವ ಮುನ್ಸೂಚನೆ ಇದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹಾಗೂ ಭಾರತೀಯ ಹವಾಮಾನ ಇಲಾಖೆ ನೀಡಿದೆ ಎಂದು ಮೈಸೂರಿನ ನಾಗನಹಳ್ಳಿ ಗ್ರಾಮೀಣ ಕೃಷಿ ಹವಾಮಾನ ಕ್ಷೇತ್ರ ವಿಭಾಗ ತಿಳಿಸಿದೆ.

ಜಿಲ್ಲೆಯಲ್ಲಿ ಗರಿಷ್ಟ 34 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಟ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಗಾಳಿ ಪ್ರತಿ ಗಂಟೆಗೆ 7 ರಿಂದ 8 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಇನ್ನು ಮುಂಗಾರು ಎರಡು ವಾರ ತಡವಾಗಿರುವ ಹಿನ್ನೆಲೆಯಲ್ಲಿ ಕೃಷಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಿದೆ. ಅದರಂತೆ ಮಣ್ಣಿನ ತೇವಾಂಶ ಸಂರಕ್ಷಣೆ ಪದ್ಧತಿ ಅನುಸರಿಸಬೇಕು. ಇಳಿಜಾರಿಗೆ ಅಡ್ಡಲಾಗಿ ಬಿತ್ತನ ಮಾಡಬೇಕು. ಸಮತೋಲಿತ ಪೋಷಕಾಂಶಗಳ ನಿರ್ವಹಣೆ ಜತೆಗೆ ಜೈವಿಕ ಗೊಬ್ಬರಗಳಿಂದ ಬೀಜೋಪಚಾರವಿರಲಿ. ಬಿತ್ತನೆಗೆ ಮುನ್ನ ಬೀಜಗಳನ್ನು ನೀರಿನಲ್ಲಿ ನೆನೆಸಿ ಬಳಿಕ ಬಿತ್ತನೆ ಮಾಡಬೇಕು. ರಾಗಿಯಲ್ಲಿ ಒಣ ಬಿತ್ತನೆ, ಸೂಕ್ಷ್ಮ ಜೀವಾಣುಗಳಿಂದ ಬೀಜೋಪಚಾರ ಮಾಡಬೇಕು. ಪ್ರಮುಖವಾಗಿ ಮಣ್ಣಿನ ತೇವಾಂಶ ಕಾಪಾಡಿಕೊಳ್ಳಲು ಶೇ.10ರಷ್ಟು ಸಾವಯವ ಗೊಬ್ಬರವನ್ನು ಬಳಸುವಂತೆ ಸಲಹೆ ನೀಡಿದೆ.

ಇನ್ನು ಕಬ್ಬು ಬೆಳೆಗೆ ಬಿಳಿ ಉಣ್ಣೆ ಹೇನು ಹರಡುವ ಸಾಧ್ಯತೆ ಇದೆ. ಇವುಗಳು ಗರಿಗಳ ತಳಭಾಗದಲ್ಲಿದ್ದು, ಕಬ್ಬಿನ ರಸ ಹೀರುತ್ತಿರುತ್ತವೆ. ತಳಗರಿಗಳಲ್ಲಿ ಕಪ್ಪು ಬೂಷ್ಟು ಬೆಳೆದುಕೊಂಡಿರುತ್ತದೆ. ಇದರಿಂದ ಬೆಳೆ ಕುಂಠಿತವಾಗಲಿದೆ. ಆದ್ದರಿಂದ ಕೀಟಭಾದೆ ತೀವ್ರತೆಯಾದರೆ ಲೀಟರ್ ನೀರಿಗೆ 1.7 ಮಿ.ಲೀ ಡೈಮಿಥೋಯೇಟ್-30 ಇಸಿ ಅಥವಾ 2 ಮಿ.ಲೀ ಕ್ಲೋರೋಪೈರಿಪಾಸ್-20 ಇಸಿ ಸೇರಿಸಿ ಸಿಂಪಡಿಸಬೇಕು ಎಂದು ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net