

ಮಂಡ್ಯ: ಜಿಲ್ಲೆಯಲ್ಲಿ ಜೂ.10ರಿಂದ 14ರವರೆಗೆ ಮೋಡ ಕವಿದ ವಾತಾವರಣವಿರಲಿದ್ದು, ತುಂತುರು ಮಳೆ ಬೀಳುವ ಸಾಧ್ಯತೆ ಇದೆ. ಅಂತೆಯೇ ನೈರುತ್ಯ ಮುಂಗಾರು ಮಾರುತಗಳು ಜೂ.8ರಂದು ಕೇರಳಕ್ಕೆ ಪ್ರವೇಶಿಸಲಿದ್ದು, ಮುಂದಿನ 48 ಗಂಟೆಗಳಲ್ಲಿ ರಾಜ್ಯದ ದಕ್ಷಿಣ ಒಳನಾಡು ಪ್ರದೇಶಕ್ಕೆ ಬರಬಹುದು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹಾಗೂ ಭಾರತೀಯ ಹವಾಮಾನ ಇಲಾಖೆ ಮಾಹಿತಿ ಮೇರೆಗೆ ವರದಿ ನೀಡಿರುವ ಮೈಸೂರು ನಾಗನಹಳ್ಳಿ ಗ್ರಾಮೀಣ ಕೃಷಿ ಹವಾಮಾನ ಸೇವಾ ಕೃಷಿ ವಿಭಾಗ, ಜೂ.10ರಂದು 3 ಮಿ.ಮೀ ಮತ್ತು 11ರಂದು 2, 12ರಂದು 2, 13ರಂದು 4 ಹಾಗೂ ಜೂ.14ರಂದು 6 ಮಿ.ಮೀ ಮಳೆಯಾಗಬಹುದು. ಗರಿಷ್ಟ 34 ರಿಂದ 35 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಟ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಗಾಳಿಯು ಪ್ರತಿ ಗಂಟೆಗೆ 7 ರಿಂದ 8 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ.
ಇನ್ನು ಮೆಣಸಿನಕಾಯಿ ಬೆಳೆಗೆ ಸಸಿ ಕೊಳೆರೋಗ ಹರಡುವ ಸಾಧ್ಯತೆ ಇರುವುದರಿಂದ ರೋಗಕ್ಕೆ ತುತ್ತಾದ ಗಿಡದ ಕಾಂಡವು ಕಪ್ಪು ಅಥವಾ ಕಂದು ಬಣ್ಣದಿಂದ ಕೂಡಿರುತ್ತದೆ. ಸಸಿಮಡಿಗಳಲ್ಲಿ ಕ್ರಮೇಣ ಗಿಡಗಳು ಬಾಡಿ, ಕುಸಿದು ನೆಲಕ್ಕೆ ಬೀಳುತ್ತವೆ. ಇದರ ಹತೋಟಿಗಾಗಿ ಪ್ರತಿ ಕಿ.ಗ್ರಾಂ ಬೀಜಕ್ಕೆ ಥೈರಾಮ್ 75 ಡಬ್ಲುೃಎಸ್, 2 ಗ್ರಾಂ ಬಳಸಿ ಬೀಜೋಪಚಾರ ಮಾಡಬೇಕು. ಅಥವಾ ಕ್ಯಾಪ್ಟಾನ್ 50 ಡಬ್ಲುೃಪಿ, 2 ಗ್ರಾಂ ಅನ್ನು ಲೀಟರ್ ನೀರಿಗೆ ಸೇರಿಸಿ ಸಿಂಪರಣೆ ಮಾಡಬಹುದು. ಅಂತೆಯೇ ತಂಬಾಕು ಬೆಳೆಗೆ ಸಸಿಮಡಿಯಲ್ಲಿ ಸಸಿ ಕೊಳೆರೋಗ ಹರಡುವ ಸಂಭವವಿದೆ. ಆದ್ದರಿಂದ ಇದು ಪ್ರಾಥಮಿಕವಾಗಿ ನರ್ಸರಿ ಹಂತದ ಮೊಳಕೆ ರೋಗವಾಗಿದೆ. ಕಾಂಡದ ಕೊಳೆತ ಮತ್ತು ಅಂತಹ ಸಸಿಗಳ ಕುಸಿಯುತ್ತವೆ. ಈ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ನೀರಿಗೆ ಎರಡು ಗ್ರಾಂ ಮೆಟಲಾಕ್ಸಿಲ್ ಎಂಝಡ್ 72 ಡಬ್ಲುೃಪಿ ಅಥವಾ ಎರಡು ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಲುೃಪಿ ಸೇರಿಸಿ ಪ್ರತಿ ಚದರಡಿ ಸಸಿ ಮಡಿಗೆ 500 ಮಿ.ಲೀ ಶಿಲೀಂಧ್ರನಾಶಕವನ್ನು ಮಣ್ಣಿನ ಮೇಲೆ ನೆನಸಬೇಕೆಂದು ಸಲಹೆ ನೀಡಿದೆ.
ಬಾಳೆಗೆ ಪನಾಮ ಸೊರಗು ರೋಗ ಬರುವ ಸಾಧ್ಯತೆ ಇದೆ. ಒಂದು ವೇಳೆ ಕಾಣಿಸಿಕೊಂಡರೆ ಲೀಟರ್ ನೀರಿಗೆ 20 ಗ್ರಾಂ ಕಾರ್ಬೆಂಡಜಿಂ ಸೇರಿದ ದ್ರಾವಣವನ್ನು ಗೆಡ್ಡೆಗಳಿಗೆ 2 ಅಂಗುಲ ರಂಧ್ರ ಮಾಡಿ 10 ಮಿ.ಲೀ ಶಿಲೀಂಧ್ರ ನಾಶಕವನ್ನು ಪಿಚಕಾರಿಯಿಂದ ರಂಧ್ರದಲ್ಲಿ ಸೇರಿಸಿ ಹಸಿ ಮಣ್ಣಿನಿಂದ ಮುಚ್ಚಬೇಕು. ಪ್ರತಿ ಎರಡು ತಿಂಗಳಿಗೊಮ್ಮೆ ಈ ರೀತಿ ಮಾಡಬೇಕು. ಇನ್ನು ಜಾನುವಾರುಗಳಿಗೆ ಬ್ರುಸೆಲ್ಲ ಚುಚ್ಚುಮದ್ದು(ಕಂದು ಹಾಕುವ ರೋಗ) ಹಾಗೂ ಚರ್ಮಗಂಟು ರೋಗಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಚುಚ್ಚುಮದ್ದನ್ನು ಹಾಕಿಸಬೇಕು. ಅಂತೆಯೇ ಆಡು ಮತ್ತು ಕುರಿಗಳಿಗೆ ಎಂಟರೋಟಾಕ್ಸೀಮಿಯಾ ರೋಗ ನಿರೋಧಕ ಕೊಡಿಸಬೇಕೆಂದು ಮಾಹಿತಿ ನೀಡಿದೆ.