ಮೇ.17ರವರೆಗೆ ಜಿಲ್ಲೆಯಲ್ಲಿ ಸಾಧಾರಣ ಮಳೆ: ಭತ್ತ, ರಾಗಿ, ಮುಸುಕಿನ ಜೋಳ ಉಳಿಸಿದ ವರುಣ

Rain)
Published on

ಮಂಡ್ಯ: ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ ಜಿಲ್ಲೆಯಲ್ಲಿ ಮೇ.17ರವರೆಗೆ ಮೋಡಿ ಕವಿದ ವಾತಾವರಣದ ಜತೆಗೆ ತುಂತುರುವಿನಿಂದ ಕೂಡಿದ ಸಾಧಾರಣ ಮಳೆಯಾಗುವ ಸಂಭವವಿದೆ. ಗರಿಷ್ಟ 33 ಹಾಗೂ ಕನಿಷ್ಟ 21ರಿಂದ 23 ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಅಂತೆಯೇ ಬೆಳಗ್ಗೆ ಗಾಳಿಯ ತೇವಾಂಶ ಶೇ.84 ರಿಂದ 85, ಮಧ್ಯಾಹ್ನ ಶೇ.78 ರಿಂದ 80 ಹಾಗೂ ಗಾಳಿಯು ಗಂಟೆಗೆ 4 ರಿಂದ 6 ಕಿ.ಮೀ ವೇಗದಲ್ಲಿ ಬೀಸಲಿದೆ ಎನ್ನುವ ಸೂಚನೆ ನೀಡಿದೆ.

ಈ ಅವಧಿಯಲ್ಲಿ ಭತ್ತಕ್ಕೆ ಬೆಂಕಿ ರೋಗ ಕಾಣಿಸಿಕೊಳ್ಳಬಹುದಿದ್ದು, ಅದರ ಹತೋಟಿಗಾಗಿ ಕಾರ್ಬೆಂಡಜಿಮ್ 1 ಗ್ರಾಂ ಔಷಧವನ್ನು 1 ಲೀಟರ್ ನೀರಿನಲ್ಲಿ ಅಥವಾ ಟ್ರೈ ಸೈಕ್ಲೆಜೋಲ್ 0.6 ಗ್ರಾಂ ಔಷಧವನ್ನು 1 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ದುಂಡಾಣು ರೋಗ ಕಾಣಿಸಿಕೊಂಡರೆ ಪ್ರತಿ ಲೀಟರ್ ನೀರಿಗೆ 0.1 ಗ್ರಾಂ ಸ್ಟ್ರೆಪ್ಟೋಸೈಕ್ಲಿನ್ ಮತ್ತು 0.5 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಲುೃಪಿ ಸೇರಿಸಿ ಸಿಂಪಡಿಸಬೇಕು. ಅಗತ್ಯವಿದ್ದರೆ 15 ದಿನದ ನಂತರ ಮತ್ತೆ ಸಿಂಪಡಿಸಬಹುದು. ಪ್ರತಿ ಎಕರೆಗೆ 200 ಲೀ ದ್ರಾವಣದ ಅಗತ್ಯವಿದೆ ಎಂದು ರೈತರಿಗೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ಭತ್ತ, ರಾಗಿಗೆ ಜೀವಕಳೆ: ಬಿಸಿಲ ತಾಪ ಹಾಗೂ ನೀರಿಲ್ಲದೆ ಒಣಗುತ್ತಿದ್ದ ಬೇಸಿಗೆ ಬೆಳೆಗಳಿಗೆ ಮಳೆ ಜೀವ ಕಳೆ ನೀಡಿದೆ. ಜಿಲ್ಲೆಯಲ್ಲಿ 2,965 ಹೆಕ್ಟೇರ್ ರಾಗಿ ಹಾಗೂ 17,848 ಹೆಕ್ಟೇರ್‌ನಲ್ಲಿ ಭತ್ತ ಹಾಗೂ 872 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳವಿದೆ. ಬೋರ್‌ವೆಲ್ ಸೌಲಭ್ಯವಿರುವವರಿಗೆ ಹೆಚ್ಚಿನ ತೊಂದರೆ ಇಲ್ಲದಿದ್ದರೂ, ಮಳೆ ಹಾಗೂ ಕೆಆರ್‌ಎಸ್ ಡ್ಯಾಂ ನೀರನ್ನೇ ಆಶ್ರಯಿಸಿಕೊಂಡಿದ್ದವರಿಗೆ ಸಮಸ್ಯೆಯಾಗಿತ್ತು. ಆದ್ದರಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಕೊಂಚ ನೆಮ್ಮದಿ ತರಿಸಿದೆ. ಇನ್ನು ಎಳ್ಳು ಹಾಗೂ ಅಲಸಂಧೆ ಬೆಳೆಯಲು ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net