ಎರಡು ತಿಂಗಳ ಮಳೆಗೆ ಉಡುಪಿ ಜಿಲ್ಲೆಗೆ ಆದ ನಷ್ಟ ಎಷ್ಟು? ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಮಾಹಿತಿ

UDP_DC_Vidya Kumari
Published on

ಉಡುಪಿ: ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈಯಲ್ಲಿ 2251 ಮಿ.ಮೀ. ವಾಡಿಕೆ ಮಳೆಯಾಗಿದ್ದು, ವಾಸ್ತವಿಕವಾಗಿ 2369 ಮಿ.ಮೀ ದಾಖಲಾಗಿದ್ದು, ಶೇ.21ರಷ್ಟು ಹೆಚ್ಚುವರಿ ಮಳೆಯಾಗಿದೆ. ಇದರಿಂದ ಅನೇಕ ಕಡೆಗಳಲ್ಲಿ ಪ್ರವಾಹ ಉಂಟಾಗಿದ್ದು, ವಿದ್ಯುತ್ ಕಂಬ, ರಸ್ತೆ, ಮನೆಗಳಿಗೆ ಹಾನಿ ಸೇರಿ 55 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ತಿಳಿಸಿದರು.

ಮೇ ತಿಂಗಳಲ್ಲಿ ಸಿಡಿಲಿನಿಂದಾಗಿ 3 ಜೀವಹಾನಿಯಾಗಿದ್ದು, ಜೂನ್‌ನಲ್ಲಿ ಗುಡ್ಡ ಜರಿದು ಆವರಣಗೋಡೆ ಕುಸಿದು ಹಾಗೂ ನೀರಿನಲ್ಲಿ ಕೊಚ್ಚಿಹೋಗಿ ಇಬ್ಬರು ಮೃತಪಟ್ಟಿದ್ದಾರೆ. ಜೀವ ಹಾನಿಯಾಗಿರುವ ಪ್ರಕರಣಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆೆ. ಮಳೆ ಹಾನಿಗೆ ಸಂಬಂಧಿಸಿ ಈವರೆಗೆ ತಹಸೀಲ್ದಾರ್ ಮೂಲಕ 38.59 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ. ಪ್ರಕೃತಿ ವಿಕೋಪ ನಿಧಿಯಲ್ಲಿ 16 ಕೋಟಿ ರೂ. ಲಭ್ಯವಿದೆ ಎಂದರು.

ಕಾಪು ತಾಲೂಕಿನ ಪಡುಬಿದ್ರೆ ನಡಿಪಟ್ಲದಲ್ಲಿ 100 ಮೀ, ಉಡುಪಿ ತಾಲೂಕಿನ ಹೂಡೆಯಿಂದ ಗುಜ್ಜರಬೆಟ್ಟುವರೆಗೆ 60 ಮೀ. ಕುಂದಾಪುರ ತಾಲೂಕಿನ ಮಣೂರು ಪಡುಕೆರೆಯಲ್ಲಿ 100 ಮೀಟರ್‌ವರೆಗೆ ಸಮುದ್ರ ಕೊರೆತ ಉಂಟಾಗಿದ್ದು, ತಾತ್ಕಾಲಿಕ ಪರಿಹಾರವಾಗಿ ಕಡಲ್ಕೊರೆತ ಜಾಗದಲ್ಲಿ ಬಂಡೆಕಲ್ಲುಗಳನ್ನು ಹಾಕುವಂತೆ ಬಂದರು ಇಲಾಖೆಗೆ ಸೂಚಿಸಲಾಗಿದೆ ಎಂದರು.

ಜಿಪಂ ಸಿಇಒ ಪ್ರತೀಕ್ ಬಾಯಲ್, ಎಡಿಸಿ ಮಮತಾದೇವಿ ಜಿಎಸ್. ಉಪಸ್ಥಿತರಿದ್ದರು.

261 ಮನೆಗಳಿಗೆ ಹಾನಿ

ಮಳೆಯಿಂದಾಗಿ 9 ಮನೆ ಸಂಪೂರ್ಣ, 552 ಮನೆಗಳು ಭಾಗಶಃ ಹಾನಿಯಾಗಿವೆ. 67 ದನದ ಕೊಟ್ಟಿಗೆ, 270 ಹೆಕ್ಟೇರ್ ತೋಟಗಾರಿಕೆ ಬೆಳೆ, 52.94 ಹೆಕ್ಟೇರ್ ಕೃಷಿ ಬೆಳೆ ಹಾನಿಯುಂಟಾಗಿದೆ. 1500 ಹೆಕ್ಟೇರ್ ಭತ್ತದ ಕೃಷಿ ಭೂಮಿ ಜಲಾವೃತಗೊಂಡಿದೆ. 712 ಕಿ.ಮೀ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, 57 ಕಿ.ಮೀ ವಿದ್ಯುತ್ ಲೈನ್‌ಗಳು ತುಂಡಾಗಿವೆ. 3034 ವಿದ್ಯುತ್ ಕಂಬ, 535 ಮರಗಳು ಧರಾಶಾಹಿಯಾಗಿದ್ದು, 20 ಟ್ರಾನ್‌ಸ್ಾರ್ಮರ್ ಹಾಳಾಗಿವೆ. 39 ಶಾಲೆ, 20 ಅಂಗನವಾಡಿಗಳಿಗೆ ಹಾನಿಯಾಗಿರುವ ಬಗ್ಗೆ ಅಂದಾಜು ವರದಿಯನ್ನು ಸಂಬಂಧಪಟ್ಟ ಇಲಾಖೆಗಳಿಂದ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಟಾಸ್ಕ್‌ಪೋರ್ಸ್ ರಚನೆ

ಜಿಲ್ಲೆಯಲ್ಲಿ 63 ಗ್ರಾಪಂಗಳ 4 ಸಾವಿರ ಕುಟುಂಬಗಳು ನದಿಪಾತ್ರದಲ್ಲಿ ವಾಸಿಸುತ್ತಿದ್ದು, ಅಪಾಯದಲ್ಲಿರುವ 86 ಗ್ರಾಮಗಳನ್ನು ಗುರುತಿಸಲಾಗಿದೆ. ಹೀಗಾಗಿ ಎಲ್ಲಾ 155 ಗ್ರಾಪಂಗಳಲ್ಲಿ ಪಿಡಿಒ ಅಧ್ಯಕ್ಷತೆಯ ಗ್ರಾಪಂ ಟಾಸ್ಕ್‌ಪೋರ್ಸ್ ರಚಿಸಲಾಗಿದೆ. ಈವರೆಗೆ ಪ್ರವಾಹ ಪೀಡಿತ ಪ್ರದೇಶಗಳಿಂದ 164 ಮಂದಿಯನ್ನು ರಕ್ಷಿಸಲಾಗಿದ್ದು, 8 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಡಾ.ವಿದ್ಯಾಕುಮಾರಿ ಮಾಹಿತಿ ನೀಡಿದರು.

ಒತ್ತಿನೆಣೆ ಗುಡ್ಡ ಸರ್ವೇ

ಶಿರೂರು ಒತ್ತಿನೆಣೆಯಲ್ಲಿ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿಗೆ ಗುಡ್ಡ ಕುಸಿಯುವ ಭೀತಿ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಲಾಗಿತ್ತು. ಹೆದ್ದಾರಿ ಇಲಾಖೆ ಇಂಜಿನಿಯರ್‌ಗಳ ತಂಡ ಗುಡ್ಡ ಕುಸಿಯುವ ಸಾಧ್ಯತೆ ಇಲ್ಲ ಎಂದು ತಿಳಿಸಿದ್ದಾರೆ. ಜಿಲ್ಲಾಡಳಿತ ಕಡೆಯಿಂದ ಸೋಮವಾರ ಐಐಟಿ ಪ್ರಾಧ್ಯಾಪಕರ ತಂಡ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಲಿದ್ದಾರೆ. ಅವರ ವರದಿ ಅಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net