

ಚಿಕ್ಕಮಗಳೂರು: ವಿವಿಧ ಕಾರಣಗಳಿಂದ ಕಾಫಿ ಬೆಳೆ ಹಾನಿಗೊಂಡು ಬೆಳೆಗಾರರಿಗೆ ನಷ್ಟವಾಗಿರುವುದರಿಂದ ಕಾಫಿ ಬೆಳೆ ಸಾಲ ಮನ್ನಾ ಮಾಡಬೇಕು ಎಂದು ಕಾಫಿ ಮಂಡಳಿ ಮಾಜಿ ಸದಸ್ಯ ಡಿ.ಎಂ.ವಿಜಯ್ ಆಗ್ರಹಿಸಿದರು.
ಆಲ್ದೂರು ಕಾಫಿ ಬೆಳೆಗಾರರ ಸಂಘದ ನೇತೃತ್ವದಲ್ಲಿ ಬೆಳೆಗಾರರು ಗುರುವಾರ ಗಾಂಧಿ ಪಾರ್ಕ್ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತ, ರೋಗಬಾಧೆ ಇನ್ನಿತರ ಸಮಸ್ಯೆಗಳಿಂದ ತತ್ತರಿಸಿರುವ ಕಾಫಿ ಬೆಳೆಗಾರರು ಇತ್ತೀಚೆಗೆ ಅಕಾಲಿಕ ಮಳೆಯಿಂದ ಬೆಳೆ ಹಾನಿಗೊಂಡು ಭಾರಿ ನಷ್ಟ ಅನುಭವಿಸಿದ್ದಾರೆ ಎಂದು ಹೇಳಿದರು.
ಈ ಹಿಂದೆ ಕೇಂದ್ರ ಕಾಂಗ್ರೆಸ್ ಸರ್ಕಾರ ಕಾಫಿ ಬೆಳೆಗಾರರಿಗೆ ಹಲವು ಪ್ಯಾಕೇಜ್ಗಳನ್ನು ನೀಡುವ ಮೂಲಕ ಸಹಾಯ ಹಸ್ತ ಚಾಚಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಕಾಫಿ ಬೆಳೆಗಾರರತ್ತ ತಿರುಗಿ ನೋಡುತ್ತಿಲ್ಲ. ಕಾಫಿ ಮಂಡಳಿಯನ್ನೇ ಮುಚ್ಚಲು ಮುಂದಾಗಿದೆ ಎಂದು ಆರೋಪಿಸಿದರು.
ಆಲ್ದೂರು ಕಾಫಿ ಬೆಳೆಗಾರರ ಸಂಘದ ಖಜಾಂಚಿ ತೌಸೀಫ್ ಅಲಿ ಮಾತನಾಡಿ, ಅಕಾಲಿಕ ಮಳೆಯಿಂದ ಸಣ್ಣ, ಅತಿ ಸಣ್ಣ ಬೆಳೆಗಾರರ ಸ್ಥಿತಿ ಹೇಳ ತೀರದಾಗಿದೆ. ಕಾಫಿ ಬೆಳೆಗಾರರಿಗೆ ಜೀವನಕ್ಕೆ ಬೇಕಾದ ಎಲ್ಲ ದಾರಿಗಳು ಬಂದ್ ಆಗಿದೆ. ಸಾಲ ತೀರಿಸಲಾಗದೆ ಬ್ಯಾಂಕ್ ನೋಟಿಸ್ಗಳು ಬರುತ್ತಿವೆ. ಸರ್ಕಾರ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಪ್ರತ್ಯೇಕ ಕಾರಿಡಾರ್ ರಚನೆ ಮಾಡಲಿ: ಕೇಂದ್ರ ಸರ್ಕಾರ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಬೇಕು. ಕಾಫಿ ಮಂಡಳಿಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಕಾಳುಮೆಣಸು ಆಮದು ಮಾಡಿಕೊಳ್ಳುತ್ತಿರುವುದನ್ನು ತಕ್ಷಣ ಕೈ ಬಿಡಬೇಕು, ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಪ್ರತ್ಯೇಕ ಕಾರಿಡಾರ್ ರಚನೆ ಮಾಡಬೇಕು ಎಂದು ಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಸುರೇಶ್ ಆಗ್ರಹಿಸಿದರು.
ಧರಣಿ ನಂತರ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅರಣ್ಯ ಇಲಾಖೆ ಮತ್ತು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಂಘದ ಕಾರ್ಯದರ್ಶಿ ಲವ, ಫಾರೂಕ್ ಅಹಮದ್, ಅಶೋಕ್, ಕೃಷ್ಣೇಗೌಡ, ಹೂವಪ್ಪ, ಲಕ್ಷ್ಮಣ್ ಇತರರಿದ್ದರು.