

ಮೈಸೂರು: ಜಿಲ್ಲೆಯಲ್ಲಿ ಡಿ.29 ರಿಂದ ಜ.1ರ ಅವಧಿಯಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ಹಗರುವಾದ ಮಳೆ ಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ. ಪ್ರಕಾಶ್ ಮುನ್ಸೂಚನೆ ನೀಡಿದ್ದಾರೆ.
ದೀರ್ಘಾವಧಿ ಹವಾಮಾನ ಮುನ್ಸೂಚನೆಯ ಪ್ರಕಾರ ಡಿ.30 ರಿಂದ ಜ.5ರವರೆಗೆ ಸರಾಸರಿಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲೆಯಲ್ಲಿ ಮುಂದಿನ ಮೂರ‌್ನಾಲ್ಕು ದಿನಗಳ ಕಾಲ ಬೆಳೆಗಳ ಕಟಾವು ಮಾಡುವ ರೈತರು ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗಿನ ಜಾವ ಮತ್ತು ರಾತ್ರಿ ಉಷ್ಣಾಂಶ ಇಳಿಕೆಯಾಗುವ ಹಿನ್ನೆಲೆಯಲ್ಲಿ ಜಾನುವಾರು, ರೇಷ್ಮೆ ಹಾಗೂ ಕೋಳಿ ಸಾಕಾಣೆ ಕೊಠಡಿಯ ಉಷ್ಣಾಂಶದ ಸ್ಥಿರತೆಯನ್ನು ವಿದ್ಯುತ್ ಬಲ್ಬ್ ಒದಗಿಸುವ ಮೂಲಕ ಕಾಪಾಡಿಕೊಳ್ಳಬೇಕು. ಎರೆಹುಳು ಘಟಕದಲ್ಲಿ ಹೆಚ್ಚಿನ ತೇವಾಂಶ ಇರದಂತೆ ಎಚ್ಚರ ವಹಿಬೇಕು. ಎರೆಕುಣಿಕೆಗಳಲ್ಲಿ ಎರೆಗೊಬ್ಬರ ಉತ್ಪಾದನೆಯಾಗುವವರೆಗೆ ಶೇ.60-70 ತೇವಾಂಶ ಇರುವಹಾಗೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.