

ತುರುವೇಕೆರೆ : ತಾಲೂಕಿನಾದ್ಯಂತ ಕಳೆದ ಮೂರ್ನಾಕು ದಿನಗಳಿಂದ ಎಡೆಬಿಡದೇ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಎಲ್ಲಡೇ ಮಳೆ ನೀರು ಅವರಿಸಿ ಕೆರೆ, ಕಟ್ಟೆಗಳು ತುಂಬಿ ಕೋಡಿಯಾಗಿ ಹಳ್ಳ ಕೊಳ್ಳಗಳಲ್ಲಿ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದೆ.
ತಾಲೂಕಿನಾದ್ಯಂತ ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆ ರೈತರು ತಮ್ಮ ಜಾನುವಾರುಗಳಿಗೆ ಮೇವು ಓದಗಿಸಲು ಪರದಾಡುವಂತಾಗಿದೆ. ಹಗಲಿನಲ್ಲಿಯೇ ಮಳೆ ಸುರಿಯುವುದರಿಂದ ಜಾನುವಾರುಗಳನ್ನು ಮೇಯಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ತರಕಾರಿ ಕಟಾವಿಗೂ ಸಮಸ್ಯೆಯಾಗಿದೆ. ಮಳೆಯಿಂದಾಗಿ ರಸ್ತೆಗಳೇಲ್ಲ ಜಲಾವೃತವಾಗಿದ್ದು, ಕೆಲವು ಗ್ರಾಮದ ಮಣ್ಣಿನ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿ ಜನರು ಸಂಚರಿಸಲು ಸಾಧ್ಯವಾಗದಂತಾಗಿವೆ. ಪಟ್ಟಣದ ಬೀದಿ ಬದಿ ವ್ಯಾಪಾರಿಗಳ ವ್ಯಪಾರಕ್ಕೂ ವರುಣ ಅಡ್ಡಿಯಾಗಿದೆ.
ತಾಲೂಕಿನ ಮಲ್ಲಾಟ್ಟ ಕೆರೆ ತುಂಬಿ ಕೋಡಿ ನೀರು ರಭಸವಾಗಿ ಹರಿಹುತ್ತಿದೆ. ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದರಿಂದ ಆನೆಕೆರೆ, ಮಲ್ಲಾಟ್ಟ ಗ್ರಾಮದ ಕಡೆ ಸಂಚಾರಕ್ಕೆ ಸಮಸ್ಯೆಯಾಗಿದೆ. ಮಲ್ಲಾಟ್ಟ ಕೆರೆಯ ಕೋಡಿಯ ಸೊಬಗನ್ನು ನೋಡಲು ಜಿಲ್ಲೆಯ ಹಲವು ಭಾಗಗಳಿಂದ ಪ್ರವಾಸಿಗರು ಆಗಮಿಸಿತ್ತಿದ್ದಾರೆ. ತಾಲೂಕಿನ ಸಾರಿಗೇಹಳ್ಳಿಕೆರೆ ಕೋಡಿಯಲ್ಲಿ ನೀರು ಹೆಚ್ಚಾಗಿ ರಸ್ತೆ ಮೇಲೆ ಹರಿಯುತ್ತಿದ್ದು, ದಂಡಿನಶಿವರ ಕಡೆಗೆ ತೆರಳುವ ಜನರು ಸಂಚರಿಸಲು ಪರದಾಡುವಂತಾಗಿದೆ. ತುರುವೇಕೆರೆ ಕೆರೆ ತುಂಬಿ ಹರಿಯುತ್ತಿದ್ದು, ಜನರು ನಿಂತು ವೀಣೆ ಮಾಡಿ ಮೊಬೈಲ್ನಲ್ಲಿ ಕೋಡಿ ದೃಶ್ಯ ಸೆರೆ ಹಿಡಿಯುತ್ತಿದ್ದುದು ಕಂಡು ಬಂದಿತು.
ಅಡಕೆ, ತೆಂಗಿನ ತೋಟ ಸಾಲು, ಹೊಲ, ಗದ್ದೆ, ಕಟ್ಟೆ ಮತ್ತು ಚೆಕ್ ಡ್ಯಾಂಗಳಲ್ಲಿ ಮಳೆಯ ನೀರು ಸಂಗ್ರಹವಾಗಿದೆ. ತಾಲೂಕಿನ ದಬ್ಬೇಟ್ಟ ಹೋಬಳಿಯ ಓಬ್ಬೇನಾಗಸಂದ್ರದ ಲಲಿತಮ್ಮ ಅವರ ಮನೆಯ ಗೋಡೆ ಕುಸಿದು ಬಿದ್ದು ದವಸ, ದಾನ್ಯ, ಶೀಟ್ ಸೇರಿದಂತೆ ಹಲವು ಪರಿಕರಗಳು ಹಾಳಾಗಿವೆ.
ರಸ್ತೆ ಮೇಲೆ ಶಿಂಷಾ ನದಿ ನೀರು : ಪಟ್ಟಣದ ಮುನಿಯೂರು ಗೇಟ್ ಬಳಿಯ ಶಿಂಷಾ ನದಿ ತುಂಬಿ ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಹಿನ್ನೀರಿನ ಹರಿವು ರಭಸವಾಗಿರುವ ಕಾರಣ ಮುನಿಯೂರು ಗದ್ದೆ ಬಯಲಿನ ವರೆವಿಗೂ ನೀರು ಆವರಿಸಿಕೊಂಡಿದೆ. ಪುರ&ತಾಳಕ್ಕೆರೆ ಮತ್ತು ಗೋರಾಟ್ಟ&ಡಿ.ಕಲ್ಕೆರೆ ಸಂಪರ್ಕಿಸುವ ಸೇತುವೆ ಮೇಲೆ ಶಿಂಷಾ ನದಿ ನೀರು ಹರಿಯುತ್ತಿದೆ. ತಾಲೂಕಿನ ಕೊಂಡಜ್ಜಿ ಕ್ರಾಸ್ ಸೊಪ್ಪನಹಳ್ಳಿ ಮಧ್ಯೆದ ಕೊಂಡಜ್ಜಿ ಹಳ್ಳ ರಸ್ತೆ ಮೇಲೆ ಹರಿಯುತ್ತಿದೆ. ಕಳೆದ ಐದಾರು ವರ್ಷದ ಹಿಂದೆ ಇದೇ ಹಳ್ಳದಾಟುವಾಗ ಕಾರು ಕೊಚ್ಚಿ ಹೋಗಿ ಚಾಲಕ ಸಾವನ್ನಪ್ಪಿದ ದುರ್ಟನೆ ನಡೆದಿತ್ತು. ಆದರೂ ಸಮರ್ಪಕ ರಸ್ತೆ ಹಾಗೂ ಸೇತುವೆ ನಿರ್ಮಾಣ ಮಾಡಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ.