

ಕೆ.ಕೆಂಚಪ್ಪ, ಮೊಳಕಾಲ್ಮೂರು
ಬರ ಪೀಡಿತ ತಾಲೂಕಿನಲ್ಲಿ ಕಳೆದ ವರ್ಷ ಸುರಿದ ಭರ್ಜರಿ ಮಳೆಯಿಂದ ಕೆರೆ, ಕಟ್ಟೆಗಳಲ್ಲಿ ನೀರು ತುಂಬಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚುವ ಮೂಲಕ ನೂರಾರು ಹೆಕ್ಟೇರ್ನಲ್ಲಿ ಭತ್ತದ ಬೆಳೆ ಕಂಗೊಳಿಸುತ್ತಿದೆ.
ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ಬೇಸಿಗೆ ಬಂತೆಂದರೆ ಕುಡಿಯುವ ನೀರಿಗೂ ಪರಿತಪಿಸುವ ಬಯಲುಸೀಮೆ ಪ್ರದೇಶದಲ್ಲಿ ಮಳೆಯಿಂದ ಈ ವರ್ಷ ಜೀವ ಕಳೆ ಬಂದಿದೆ. ಕೆರೆಗಳ ಅಚ್ಚುಕಟ್ಟು ಪ್ರದೇಶ ಹಾಗೂ ಕೊಳವೆ ಬಾವಿ ನೀರು ಬಳಸಿಕೊಂಡು ರೈತರು ಫೆಬ್ರವರಿಯಲ್ಲಿ ಅರ್ಧ ಎಕರೆಯಿಂದ 5 ಎಕರೆವರೆಗೂ ಬೇಸಿಗೆ ಭತ್ತ ನಾಟಿ ಮಾಡಿದ್ದಾರೆ.
ಆಯಕಟ್ಟಿನ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಹಚ್ಚ ಹಸಿರಿನ ಭತ್ತದ ಬೆಳೆ ಕಂಗೊಳಿಸುತ್ತಿದೆ. ಪ್ರತಿವರ್ಷ ನೀರಿನ ಅಭಾವದಿಂದ ಅಲ್ಪ-ಸ್ವಲ್ಪ ಹಣ್ಣು, ತರಕಾರಿ, ಹೂ ಬೆಳೆಯುತ್ತಿದ್ದ ರೈತರು ಈ ವರ್ಷ ಸಮೃದ್ಧ ನೀರಿನಿಂದ ಭತ್ತ ಬೆಳೆಯಲು ಮುಂದಾಗಿದ್ದು, ಒಂದೆರಡು ತಿಂಗಳಲ್ಲಿ ಬೆಳೆ ಮನೆ ಸೇರಲಿದೆ.
ತಾಲೂಕಿನ ರಂಗಯ್ಯನದುರ್ಗ ಜಲಾಶಯದ ಹಿಂಭಾಗದ ಅಚ್ಚುಕಟ್ಟು ಪ್ರದೇಶ, ನಾಗಸಮುದ್ರ, ಅಮುಕುಂದಿ, ಹಿರೇಕೆರೆಹಳ್ಳಿ, ಚಿಕ್ಕೇರಹಳ್ಳಿ, ಮರ್ಲಹಳ್ಳಿ, ನೇರ್ಲಹಳ್ಳಿ, ಗುಂಡ್ಲೂರು, ತಿಪ್ಪೀರಯ್ಯಹಟ್ಟಿ, ಓದ್ನೋಬಯ್ಯನಹಟ್ಟಿ, ತಳವಾರಹಳ್ಳಿ, ಹೊಸಹಟ್ಟಿ, ಹಾನಗಲ್, ಸಿದ್ದಾಪುರ, ಸಂತೇಗುಡ್ಡ, ಬಾಂಡ್ರಾವಿ, ಪಕ್ಕುರ್ತಿ, ಜೆ.ಬಿ.ಹಳ್ಳಿ ಸೇರಿ ಅನೇಕ ಗ್ರಾಮಗಳಲ್ಲಿ ನಾಟಿ ಮಾಡಿರುವ ನಲ್ಲೂರು ಬೆಂಟನ್, ಅರ್ಲಿಸೋನ, ಸೋನಾ ಮಸೂರಿ, ಹಂಸ ಭತ್ತ ಭರ್ಜರಿಯಾಗಿ ತೆನೆ ಕಟ್ಟಿದೆ. ಹೆಚ್ಚು ಕೊಟ್ಟಿಗೆ ಗೊಬ್ಬರ ಬಳಕೆ ಮಾಡಿದ್ದಾರೆ.
ಜೌಗು ನೀರು: ಮೊಳಕಾಲ್ಮೂರು, ಪೂಜಾರಹಟ್ಟಿ, ಕೆಳಗಳಹಟ್ಟಿ- ಮೇಗಳಹಟ್ಟಿ, ಕಾಟನಾಯಕನಹಳ್ಳಿ, ರೊಪ್ಪ, ಕಾಡುಸಿದ್ದಾಪುರ ಸೇರಿ ಅನೇಕ ಗ್ರಾಮಗಳಿಗೆ ಹೊಂದಿಕೊಂಡಿರುವ ಗುಡ್ಡಗಾಡು ಪ್ರದೇಶದ ಇಳಿಜಾರಿನಲ್ಲಿ ನೈಸರ್ಗಿಕವಾಗಿ ಹರಿಯುವ ಜೌಗು ನೀರಿನಲ್ಲೂ ಹಂಸ ಹಾಗೂ ಹಾಲುಬ್ಲು ತಳಿಯ ಭತ್ತ ಬೆಳೆಯಲಾಗುತ್ತಿದೆ.
ಕಳೆದ ವರ್ಷದ ಮಳೆ ಸಂತಸ ತರಿಸಿದೆ. ಕಳೆದ ಸೆಪ್ಟೆಂಬರ್ನಲ್ಲಿ ಒಂದು ಎಕರೆಯಲ್ಲಿ ಭತ್ತ ನಾಟಿ ಮಾಡಲಾಗಿತ್ತು. ಭರ್ಜರಿ ಮಳೆಗೆ 20 ಕ್ವಿಂಟಾಲ್ ಇಳುವರಿ ಬಂದಿತ್ತು. ಇದೀಗ ಫೆಬ್ರವರಿಯಲ್ಲಿ 2 ಎಕರೆ ನಾಟಿ ಮಾಡಲಾಗಿದೆ. ರೋಗ ರಹಿತ ಸಮೃದ್ಧ ಬೆಳೆ ಇದೆ. 45-50 ಕ್ವಿಂಟಲ್ ಇಳುವರಿ ನಿರೀಕ್ಷೆ ಇದೆ. ಚಂದ್ರಣ್ಣ, ಕೃಷಿಕ, ತಿಪ್ಪೀರಯ್ಯನಹಟ್ಟಿ. ಬೆಟ್ಟದಿಂದ ಹರಿಯುವ ಜೌಗು ನೀರಿಗೆ ಭತ್ತ ನಾಟಿ ಮಾಡಲಾಗಿದೆ. ಉತ್ತಮ ಬೆಳೆ ಕೈಸೇರುವ ನಿರೀಕ್ಷೆ ಇದೆ. ತುಪ್ಪದಮ್ಮ, ರೈತ ಮಹಿಳೆ, ರೊಪ್ಪ. ಬಯಲುಸೀಮೆಯಲ್ಲಿ ವಾಡಿಕೆ ಬೆಳೆಗಳು ಕೈಸೇರುವುದೆ ಕಷ್ಟ. ವರುಣನ ಕೃಪೆಯಿಂದ ಈ ವರ್ಷ ಕೆರೆಕಟ್ಟೆಗಳು ತುಂಬಿವೆ. ಹಣ್ಣಿನ ತೋಟಗಳಿಗೆ ಪುನರ್ಜನ್ಮ ಸಿಕ್ಕಿದೆ. ಈ ಸಲ ಭತ್ತದ ಬೆಳೆ ಅನ್ನದಾತನಿಗೆ ಎಲ್ಲಿಲ್ಲದ ಉತ್ಸಾಹ ತರಿಸಿದೆ. ಕೆ.ಎ. ಸುಧಾಕರ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ.