ದ್ವೀಪವಾದ ಕಳಸ, ಹೊರನಾಡು, ನೀರಿನಲ್ಲಿ ಕೊಚ್ಚಿಹೋಗುತ್ತಿವೆ ಕಾಡು ಪ್ರಾಣಿಗಳು

web 3
Published on

ಕಳಸ: ಕಳಸ ತಾಲೂಕಿನಾದ್ಯಾಂತ ಮಳೆ ಅಬ್ಬರ ಮುಂದುವರಿದು ತಾಲೂಕಿನಾದ್ಯಾಂತ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಬಂದ್ ಆಗಿವೆ. ಭದ್ರಾ ನದಿಯ ಪ್ರವಾಹಕ್ಕೆ ಜಾನುವಾರು, ಸಾಕು ಪ್ರಾಣಿಗಳು, ಕಾಡು ಪ್ರಾಣಿಗಳು ನೀರಿನಲ್ಲಿ ಕೊಚ್ಚಿಹೋಗುತ್ತಿವೆ. ಪ್ರತಿ ದಿನ ಅಂಗಡಿ ಕಾಯುತ್ತಿದ್ದ ನಾಯಿಯೊಂದು ಅಂಗಡಿ ನೀರಿನಲ್ಲಿ ಮುಳುಗುತ್ತಿದ್ದಂತೆ ಕೂಗುತ್ತ ಭದ್ರಾ ನದಿಯಲ್ಲಿ ಈಜಿಕೊಂಡು ಬರುತ್ತಿರುವುದನ್ನು ಕಂಡ ಜನರಲ್ಲಿ ಮರುಕ ಹುಟ್ಟಿತು.

ಕಳಸ-ಹೊರನಾಡು ನಡುವಿನ ಹೆಬ್ಬಾಳೆ ಸೇತುವೆ ಮಳುಗಿ ಆಸುಪಾಸಿನ ಅಂಗಡಿ, ಹೋಮ್ ಸ್ಟೇಗಳು ಬಹುತೇಕ ಮುಳುಗಡೆಯಾಗಿವೆ. ಹಳುವಳ್ಳಿ-ಹೊರನಾಡು ರಸ್ತೆ ಸಮೀಪ ಕಳೆದ ಬಾರಿ ನಿರ್ವಿುಸಿದ್ದ ಸೇತುವೆ, ಅಬ್ಬುಗುಡಿಗೆ-ಕಲ್ಲುಗೋಡು ಸಂಪರ್ಕ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ.

ಕುದುರೆಮುಖ ಭಾಗಗಳಲ್ಲಿ ಮರಗಳು ಧರೆಗುರುಳಿ, ಗುಡ್ಡ ಜರಿದಿವೆ. ನೆಲ್ಲಿಬೀಡು ಸೇತುವೆ ಮೇಲೆ ನೀರು ಹರಿದು ಕಳಸ ಸಂಪರ್ಕ, ಮಹಲ್ಗೋಡ್ ಸೇತುವೆ ಮುಳುಗಿ ಕಳಸ- ಬಾಳೆಹೊನ್ನೂರು ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಳಸ ಸಮೀಪದ ಹೊಸೂರು ಬಳಿ ಭದ್ರಾ ನದಿ ನೀರು ರಸ್ತೆ ಮೇಲೆ ಹರಿದು ಕಳಕ್ಕೋಡು, ಹೊಸೂರು ಕಾರ್ಲೆ ಸಂಪರ್ಕ ಕಡಿತವಾಗಿದೆ. ಹಳುವಳ್ಳಿ ಹೊರನಾಡು ರಸ್ತೆ ಕುಸಿದು ಹೊರನಾಡು ಸಂಪರ್ಕ ಕಡಿತವಾಗಿದೆ.

ಮಾಸ್ತೀಕಾನ್ ಸಮೀಪ ಮುಖ್ಯರಸ್ತೆ ಜರಿದು ಬಿದ್ದ ಪರಿಣಾಮ ಕಳಸ -ಕೊಟ್ಟಿಗೆಹಾರ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಕೋಣೆಬೈಲ್​ನಲ್ಲಿ ಗದ್ದೆ ನಾಟಿ ಮಾಡಲು ಹದ ಮಾಡಿದ ಗದ್ದೆಯೇ ಕೊಚ್ಚಿಕೊಂಡು ಹೋಗಿದೆ. ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳ ರಸ್ತೆಗಳಲ್ಲಿ ಗುಡ್ಡ ಜರಿದು ಪಟ್ಟಣದ ಕಡೆ ಬಾರದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net