

ಭದ್ರಾವತಿ: ಭೂಮಿಗೂ ಮಳೆಗೂ ಅವಿನಾಭಾವ ಸಂಬAಧವಿದೆ. ಮಳೆ ಸುರಿದರೆ ಮಾತ್ರ ಭೂಮಿಯ ಮೇಲಿನ ಸಕಲ ಜೀವರಾಶಿಗಳು ಬದುಕುಳಿಯಲು ಸಾಧ್ಯವಾಗುತ್ತದೆ. ಅದಕ್ಕಾಗಿಯೆ ಕನ್ನಡ ಕವಿಗಳು ತಮ್ಮದೇ ರೀತಿಯಲ್ಲಿ ವರ್ಷಋತುವನ್ನು ಬಣ್ಣಿಸಿದ್ದಾರೆ ಎಂದು ವಿಮರ್ಶಕ ಡಾ. ಎಚ್.ಎಸ್.ಸತ್ಯನಾರಾಯಣ ಹೇಳಿದರು.
ತರೀಕೆರೆ ರಸ್ತೆ ನಯನ ಸಭಾಂಗಣದಲ್ಲಿ ಭಾನುವಾರ ಭೂಮಿಕಾ ವೇದಿಕೆ ಆಯೋಜಿಸಿದ್ದ ಕನ್ನಡ ಕವಿಗಳ ಋತು ವಿಲಾಸ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಪಂಪ, ರನ್ನ, ಕುಮಾರವ್ಯಾಸ, ರತ್ನಾಕರವರ್ಣಿಯಿಂದ ಮೊದಲ್ಗೊಂಡು ಆಧುನಿಕ ಕವಿಗಳು ಮಳೆಯನ್ನು ಜೀವನಾಡಿಯಾಗಿ ಕಂಡಿದ್ದಾರೆ. ಬೇಂದ್ರೆ ಕುವೆಂಪು. ಕೆ.ಎಸ್.ನರಸಿಂಹಸ್ವಾಮಿ ಸೇರಿ ಹಲವರು ಭೂಮಿಗೆ ಮಳೆಯ ಮಹತ್ವವನ್ನು ಹಾಡು, ಕಥೆ, ಕವನ ಸಾಹಿತ್ಯ ರಚನೆಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಾನವನ ಸ್ವಾರ್ಥ ಗುಣದಿಂದಾಗಿ ಋತುಮಾನಗಳೇ ಬದಲಾಗುತ್ತಿವೆ. ಮಳೆಗಾಲದಲ್ಲಿ ಮಳೆಯ ಬದಲಾಗಿ ಸುಡುಬೇಸಿಗೆ ನೋಡುವಂತಾಗಿದೆ. ವಾತಾವರಣದಲ್ಲಿ ಏರುಪೇರುಗಳಾಗಿ ಕಲುಶಿತ ಗಾಳಿ ಕುಡಿಯುವಂತಾಗಿದೆ. ಸ್ವಚ್ಛ ಪರಿಸರ ಮರೀಚಿಕೆಯಾಗಿದೆ. ಇಷ್ಟಾದರೂ ಮನುಷ್ಯ ಎಚ್ಚೆತ್ತುಕೊಳ್ಳುವುದು ಯಾವಾಗ ಎಂಬ ಪ್ರಶ್ನೆ ನಮ್ಮ ಮುಂದಿದೆ ಎಂದು ವಿವರಿಸಿದರು.
ಭೂಮಿಕಾ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್.ಭಟ್ ಅಧ್ಯಕ್ಷತೆ ವಹಿಸಿದ್ದರು. ಡಾ. ವೀಣಾ ಭಟ್, ಕೆ.ಆನಂದ್, ಡಾ.ನಾಗರಾಜ್, ಅಪರಂಜಿ ಶಿವರಾಜ್ ಇತರರಿದ್ದರು.