ಎಳ್ಳು, ಸಜ್ಜೆಗೆ ವರವಾದ ಮಳೆ

ಹನೂರು ಹೋಬಳಿಯ ಮರಿಯಪುರ ಗ್ರಾಮದ ಜಮೀನೊಂದರಲ್ಲಿ ಎಳ್ಳಿನ ಫಸಲು ಸಮೃದ್ಧಿಯಿಂದ ಕೂಡಿರುವುದು.
ಹನೂರು ಹೋಬಳಿಯ ಮರಿಯಪುರ ಗ್ರಾಮದ ಜಮೀನೊಂದರಲ್ಲಿ ಎಳ್ಳಿನ ಫಸಲು ಸಮೃದ್ಧಿಯಿಂದ ಕೂಡಿರುವುದು.
Published on

ಎಸ್.ಲಿಂಗರಾಜು ಮಂಗಲ ಹನೂರು

ಹೋಬಳಿ ವ್ಯಾಪ್ತಿಯಲ್ಲಿ ಆಗಾಗ್ಗೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಳ್ಳು ಹಾಗೂ ಸಜ್ಜೆ ಫಸಲುಗಳ ಸಮೃದ್ಧಿಗೆ ಪೂರಕವಾಗಿದ್ದರೆ, ಇತ್ತ ರಾಗಿ ಹಾಗೂ ಮುಸುಕಿನ ಜೋಳದ ಬಿತ್ತನೆಗೆ ರೈತರು ಭೂಮಿ ಹದಗೊಳಿಸುವುದರತ್ತ ಚಿತ್ತ ಹರಿಸಿದ್ದು, ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದಾರೆ.

ಹನೂರು ಭಾಗದಲ್ಲಿ ಹೆಚ್ಚಿನ ರೈತರು ಖುಷ್ಕಿ ಭೂಮಿ ಹೊಂದಿದ್ದು, ಮಳೆಯನ್ನೇ ನಂಬಿಕೊಂಡು ಬೇಸಾಯ ಮಾಡುತ್ತಿದ್ದಾರೆ. ಬಹುತೇಕ ರೈತರು ವರ್ಷಕ್ಕೆ ಒಂದೇ ಬೆಳೆಯನ್ನು ಬೆಳೆದರೆ, ಕೆಲವರು 2 ಬೆಳೆಯನ್ನು ಬೆಳೆಯುತ್ತಾರೆ. ಪೂರ್ವ ಮುಂಗಾರಿನಲ್ಲಿ ಮೂರು ತಿಂಗಳ ಬೆಳೆಯಾದ ಎಳ್ಳು ಹಾಗೂ ಸಜ್ಜೆ ಹಾಗೂ ಮುಂಗಾರಿನಲ್ಲಿ ಕಡಲೆಕಾಯಿ, ರಾಗಿ ಹಾಗೂ ಮುಸುಕಿನ ಜೋಳವನ್ನು ಹೆಚ್ಚಾಗಿ ಬಿತ್ತನೆ ಮಾಡುತ್ತಾರೆ. ಕಳೆದ ವರ್ಷ ಮುಂಗಾರು ಮಳೆ ಕೊರತೆ ಪರಿಣಾಮ ತಕ್ಕಮಟ್ಟಿಗೆ ರಾಗಿ ಫಸಲು ರೈತರ ಕೈ ಹಿಡಿದಿತ್ತು. ಆದರೆ ಅಸಮರ್ಪಕ ಮಳೆಯಿಂದಾಗಿ ಬಹುತೇಕ ಕಡೆಗಳಲ್ಲಿ ಮುಸುಕಿನ ಜೋಳದ ಫಸಲು ರೈತರ ಕೈ ಹಿಡಿಯದಂತಾಗಿತ್ತು.

ಆದರೆ ಈ ಬಾರಿ ಪೂರ್ವ ಮುಂಗಾರಿನಲ್ಲಿ ಮಳೆಯಾದ್ದರಿಂದ ಹನೂರು ಹೋಬಳಿಯ ರೈತರು ಈಗಾಗಲೇ ಎಳ್ಳು ಹಾಗೂ ಸಜ್ಜೆಯನ್ನು ಬಿತ್ತನೆ ಮಾಡಿದ್ದಾರೆ. ಇದೀಗ ಆಗಾಗ್ಗೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಫಸಲು ಸಮೃದ್ಧಿಯತ್ತ ಸಾಗುತ್ತಿದೆ. ಇತ್ತ ವಾಡಿಕೆಯಂತೆ ಜುಲೈ ಆಗಸ್ಟ್ ತಿಂಗಳಲ್ಲಿ ರಾಗಿ ಹಾಗೂ ಮುಸುಕಿನ ಜೋಳವನ್ನು ಬಿತ್ತನೆ ಮಾಡುವ ರೈತರಲ್ಲಿ ಈ ಮಳೆ ಪೂರಕ ವಾತವರಣ ನಿರ್ಮಿಸಿಕೊಟ್ಟಿದ್ದು, ಪಾಳು ಬಿದ್ದಿರುವ ಭೂಮಿಯನ್ನು ಮೊದಲ ಹಂತದಲ್ಲಿ ಉಳುಮೆ ಮಾಡಿಸುವುದರ ಮೂಲಕ ಹದಗೊಳಿಸಿ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ.

706 ಹೆಕ್ಟೇರ್‌ನಲ್ಲಿ ಬಿತ್ತನೆ: ಹನೂರು ಹೋಬಳಿ ವ್ಯಾಪ್ತಿಯಲ್ಲಿ 6,016 ಹೆಕ್ಟೇರ್ ಪ್ರದೇಶ ಮಳೆಯಾಶ್ರಿತವಾಗಿದೆ. ಇದರಲ್ಲಿ ಈಗಾಗಲೇ ಕಳೆದ ಒಂದೂವರೆ ತಿಂಗಳ ಹಿಂದೆ ಹೋಬಳಿಯ ಗಾಣಿಗಮಂಗಲ, ಬಂಡಳ್ಳಿ ಹಾಗೂ ಶಾಗ್ಯ ಭಾಗದಲ್ಲಿ ಎಳ್ಳು, ಸಜ್ಜೆ ಹಾಗೂ ನೆಲಗಡಲೆಯನ್ನು ಬಿತ್ತನೆ ಮಾಡಿದ್ದರೆ, ಹನೂರು ಹಾಗೂ ಮಂಗಲ ಭಾಗದಲ್ಲಿ ಎಳ್ಳು, ಮೆಕ್ಕೆಜೋಳ ಹಾಗೂ ಕಡಲೆಕಾಯಿ ಸೇರಿದಂತೆ ಒಟ್ಟು 706 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಆಗಾಗ್ಗೆ ಮಳೆ ಆಗುತ್ತಿರುವುದರಿಂದ ಫಸಲುಗಳಿಗೆ ಕಳೆ ತಂದಿದೆ. ಹೂವು, ಕಾಳು ಕಟ್ಟುವ ಹಂತಕ್ಕೆ ಬಂದಿದೆ. ಇನ್ನುಳಿದ ಪ್ರದೇಶದಲ್ಲಿ ಮುಂದಿನ ತಿಂಗಳ ಅಂತ್ಯದಲ್ಲಿ ಹೆಚ್ಚಾಗಿ ರಾಗಿ, ಮುಸುಕಿನ ಜೋಳ ಹಾಗೂ ನೆಲಗಡಲೆ ಬಿತ್ತನೆಗೆ ರೈತರ ಚಿತ್ತ ಹರಿದಿದೆ. ಹನೂರು ಕೃಷಿ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು ಅಗತ್ಯ ಬಿತ್ತನೆ ಬೀಜವನ್ನು ಈಗಾಗಲೇ ದಾಸ್ತಾನು ಮಾಡಿದ್ದಾರೆ. 12 ಸಾವಿರ ಕೆಜಿ ನೆಲಗಡಲೆ, 2,700 ಕೆಜಿ ಮುಸುಕಿನ ಜೋಳ ಹಾಗೂ ಅಗತ್ಯಕ್ಕೆ ತಕ್ಕಂತೆ ಬಿತ್ತನೆ ರಾಗಿಯನ್ನು ಇರಿಸಲಾಗಿದೆ. ಮುಂದಿನ ದಿನಗಳಲ್ಲಿ ವಿತರಣೆ ಕಾರ್ಯ ನಡೆಯಲಿದೆ

ವಿಮೆ ಮಾಡಿಸಲು ಸಲಹೆ: ಕೆಲವೊಂದು ವರ್ಷಗಳಲ್ಲಿ ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ಬಿತ್ತನೆ ಮಾಡಿದ ಫಸಲು ರೈತರ ಕೈಗೂಡುವುದಿಲ್ಲ. ಇದರಿಂದ ನಷ್ಟವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ರೈತ ಸುರಕ್ಷಾ ಫಸಲು ಬಿಮಾ ಯೋಜನೆಯನ್ನು ಜಾರಿಗೊಳಿಸಿದೆ. ಫಸಲುಗಳಿಗೆ ಬ್ಯಾಂಕ್‌ನಲ್ಲಿ ವಿಮೆ ಮಾಡಿಸಲು ಅವಕಾಶ ಒದಗಿಸಲಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ಉದ್ದು, ಹೆಸರು, ಎಳ್ಳು, ಸೂರ್ಯಕಾಂತಿ, ಅಲಸಂದೆ, ನೆಲಗಡಲೆ, ಮುಸುಕಿನ ಜೋಳ, ಹುರುಳಿ ಹಾಗೂ ಸಜ್ಜೆ ಬೆಳೆಗಳಿಗೆ ವಿಮೆ ಮಾಡಿಸಬಹುದಾಗಿದ್ದು, ಜೂ.30 ರಂದು ಕೊನೆಯ ದಿನಾಂಕವಾಗಿದೆ. ಹಾಗೆಯೇ ರಾಗಿ ಹಾಗೂ ತೊಗರಿ ಬೆಳೆಗೆ ಜು.31 ರಂದು ಕೊನೇ ದಿನವಾಗಿದೆ. ಆದ್ದರಿಂದ ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಸವಲತ್ತುಗಳ ಪ್ರಯೋಜನ ಪಡೆಯಿರಿ: ಮುಂಗಾರು ಶುರುವಾಗಿದ್ದು, ರೈತರು ಕೃಷಿ ಚಟುವಟಿಕೆಯತ್ತ ಗಮನಹರಿಸಿದ್ದಾರೆ. ಹಾಗಾಗಿ ಕೃಷಿ ಭಾಗ್ಯ ಯೋಜನೆಯಡಿ ಸಾಮಾನ್ಯ ವರ್ಗಕ್ಕೆ ಶೇಕಡ 80ರಷ್ಟು ಹಾಗೂ ಎಸ್ಸಿ, ಎಸ್ಟಿ ವರ್ಗದ ರೈತರಿಗೆ ಶೇ.90 ರಷ್ಟು ಸಬ್ಸಿಡಿಯಲ್ಲಿ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳಬಹುದಾಗಿದೆ. ಹಾಗೆಯೇ ಟಾರ್ಪಾಲಿನ್, ತಂತ ಬೇಲಿ, ತುಂತುರು ನೀರಾವರಿ ಸೌಲಭ್ಯವನ್ನು ಪ್ರೋತ್ಸಾಹ ಧನದಲ್ಲಿ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಪ್ರತಿ ರೈತರು ಎಲ್ಲ ಸರ್ವೇ ನಂಬರ್‌ಗಳಿಗೂ ಎಫ್‌ಐಡಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ಹೋಬಳಿ ವ್ಯಾಪ್ತಿಯಲ್ಲಿ 706 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿರುವ ಎಳ್ಳು, ಸಜ್ಜೆ ಹಾಗೂ ಇನ್ನಿತರೆ ಬೆಳೆಗಳು ಚೆನ್ನಾಗಿ ಬಂದಿದೆ. ಉತ್ತಮ ವಾತಾವರಣವಿದೆ. ರೈತರಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದೆ. ನೆಲಗಡಲೆ, ರಾಗಿ ಹಾಗೂ ಮುಸುಕಿನ ಜೋಳವನ್ನು ಬಿತ್ತನೆ ಮಾಡುವ ರೈತರು ಭೂಮಿಯನ್ನು ಹದಗೊಳಿಸುತ್ತಿದ್ದಾರೆ. ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜವನ್ನು ದಾಸ್ತಾನು ಮಾಡಲಾಗಿದೆ. ಜುಲೈ, ಆಗಸ್ಟ್‌ನಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ. ಕೃಷಿಗೆ ಅನುಕೂಲವಾಗುವಂತೆ ಮುತುವರ್ಜಿ ವಹಿಸಲಾಗಿದೆ.

ನಾಗೇಂದ್ರ, ಕೃಷಿ ಅಧಿಕಾರಿ ಹನೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net