

ಮೈಸೂರು; ಚಳಿಗಾಲದ ಸಂದರ್ಭದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ ದಿನವಿಡೀ ತುಂತುರು ಮಳೆ ಆಗಿದೆ. ಇದರಿಂದಾಗಿ ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದರ ಪರಿಣಾಮ ಮೈಸೂರು ಜಿಲ್ಲೆಯ ಮೇಲೂ ತಟ್ಟಿದೆ.ಬೆಳಗ್ಗೆಯಿಂದಲೇ ಚಳಿ, ಶೀತ, ಮಂಜು ವಾತಾವರಣದೊಂದಿಗೆ ಮಳೆಯೂ ಸುರಿಯಿತು. ಚಳಿಗಾಲದಲ್ಲಿ ಮಳೆ ಆಗಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿತು.
ದಿಢೀರ್ ಮಳೆಯಿಂದಾಗಿ ತಾಪಮಾನವೂ ಇಳಿಕೆಯಾಗಿದೆ. ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ಗೆ ಉಷ್ಣಾಂಶ ಇಳಿಕೆಯಾಗಿದೆ. ಇದರೊಂದಿಗೆ ಮೋಡ ಮುಸುಕಿದ ವಾತಾವರಣ ಆವರಿಸಿಕೊಂಡಿದೆ. ಜಿಟಿ ಜಿಟಿ ಮಳೆಯಲ್ಲೇ ಮಕ್ಕಳು ಶಾಲಾ-ಕಾಲೇಜಿಗೆ ತೆರಳಿದರು. ಸಂಜೆಯೂ ಸಹ ಅದೇ ಮಳೆಯಲ್ಲಿ ನೆನೆದುಕೊಂಡು ವಾಪಸ್ ಆದರು. ಮನೆ ಮೂಲೆ ಸೇರಿದ್ದ ಜರ್ಕಿನ್‌ಗಳು ಈಗ ಹೊರಬಂದಿವೆ.
ಸಾರ್ವಜನಿಕರು ಅದನ್ನು ಹಾಕಿಕೊಂಡು ದೈನಂದಿನ ಚಟುವಟಿಕೆಗಳಲ್ಲಿ ಸಕ್ರಿಯರಾದರು. ಮಕ್ಕಳು, ವೃದ್ಧರು ಬೆಚ್ಚನೆ ಬಟ್ಟೆಗಳನ್ನು ಧರಿಸಿಕೊಂಡು ಸಂಚರಿಸಿದರು. ಡಿ.5 ರಂದು ಸಹ ಇದೇ ರೀತಿ ವಾತಾವರಣ ಮುಂದುವರಿಯಲಿದೆ. ತುಂತುರು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.