ಉತ್ತಮ ಮಳೆ ತಂದ ‘ನಿಸರ್ಗ’, ಚಂಡಮಾರುತ ಪರಿಣಾಮ

mansoon rain
Published on

ಮಂಗಳೂರು/ಉಡುಪಿ: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ‘ನಿಸರ್ಗ’ ಚಂಡಮಾರುತ ಪರಿಣಾಮ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರವೂ ದಿನವಿಡೀ ಬಿಟ್ಟು ಬಿಟ್ಟು ಉತ್ತಮ ಮಳೆಯಾಗಿದೆ. ಆಕಾಶದಲ್ಲಿ ಮೋಡದ ಚಲನೆ ಹೆಚ್ಚಾಗಿದ್ದು, ದಟ್ಟವಾಗಿ ಮೋಡ ಕವಿದು ರಾತ್ರಿವರೆಗೂ ಸುರಿದಿದೆ.

ಅರಬ್ಬಿ ಸಮುದ್ರದ ಪೂರ್ವಕೇಂದ್ರ ಭಾಗದಲ್ಲಿ ಉಂಟಾಗಿರುವ ಚಂಡಮಾರುತ ತನ್ನ ತೀವ್ರತೆ ಹೆಚ್ಚಿಸುತ್ತಾ ಉತ್ತರ ದಿಕ್ಕಿನತ್ತ ಸಾಗುತ್ತಿರುವುದರಿಂದ ಕರಾವಳಿಗೆ ಸೈಕ್ಲೋನ್ ಭಯವಿಲ್ಲ. ಆದರೆ ಮಳೆ ಬರುವಾಗ ಬಲವಾದ ಗಾಳಿ ಬೀಸುತ್ತಿದೆ. ಜತೆಗೆ ಸಮುದ್ರವೂ ಪ್ರಕ್ಷುಬ್ಧವಾಗಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಜಿಲ್ಲಾಡಳಿತ ಸಮುದ್ರ ತಟದಲ್ಲಿರುವವರಿಗೆ ಎಚ್ಚರದಿಂದ ಇರುವಂತೆ ಸೂಚನೆ ನೀಡಿದೆ. ಕೋಸ್ಟ್‌ಗಾರ್ಡ್ ಸಿಬ್ಬಂದಿ ಸಂಭಾವ್ಯ ಅಪಾಯ ಎದುರಿಸಲು ಸನ್ನದ್ಧರಾಗಿದ್ದಾರೆ. ಜೂನ್ 4ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಬುಧವಾರವೂ ಆರೆಂಜ್ ಅಲರ್ಟ್ ಘೋಷಣೆಯಾಗಿದೆ.

ದ.ಕ ಜಿಲ್ಲೆಯ ಕೆಮ್ರಾಲ್ 40, ಬಳ್ಕುಂಜೆ 39.5, ಸುರತ್ಕಲ್ 30, ಮೂಡುಶೆಡ್ಡೆ 16, ಹೆಜಮಾಡಿ 11.7, ಮಂಗಳೂರು 7.5, ಉಡುಪಿ 22.7, ಕುಂದಾಪುರ 22.6, ಕಾರ್ಕಳ 23.4 ಮಿ.ಮೀ. ಮಳೆಯಾಗಿದೆ.

ಗಾಳಿಯ ಅಬ್ಬರಕ್ಕೆ ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ. ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು.

30 ವಿದ್ಯುತ್ ಕಂಬ ಧರೆಗೆ: ಕಾಪು 5, ಬ್ರಹ್ಮಾವರ 11, ಕಾರ್ಕಳ 1, ಹೆಬ್ರಿ 7, ಕುಂದಾಪುರ 6 ಸಹಿತ ಉಡುಪಿ ಜಿಲ್ಲೆಯಲ್ಲಿ 30 ವಿದ್ಯುತ್ ಕಂಬಗಳು ಬಿದ್ದಿವೆ. ಕಾರ್ಕಳ 2, ಹೆಬ್ರಿ 3, ಕುಂದಾಪುರದಲ್ಲಿ 4 ವಿದ್ಯುತ್ ಪ್ರವಾಹಕಗಳು ಮಿಂಚಿನ ಆಘಾತಕ್ಕೆ ಸುಟ್ಟುಹೋಗಿದ್ದು, ಮೆಸ್ಕಾಂಗೆ ಒಟ್ಟು 5.62 ಲಕ್ಷ ರೂ. ನಷ್ಟವಾಗಿದೆ. ಕಾಪು ತಾಲೂಕಿನ ಪಲಿಮಾರು ಗ್ರಾಮದ ಅಪ್ಪಿ ಪೂಜಾರ್ತಿ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಕಳತ್ತೂರು ಗ್ರಾಮದ ಸೂರ್ಯ ನಗರದ ಬೇಬಿ ಕೊರಗ ಅವರ ಮನೆಗೆ ಮರ ಬಿದ್ದಿದೆ.

ಇಂದು ಮುಂಗಾರು ಪ್ರವೇಶ ಸಾಧ್ಯತೆ: ಕೇರಳಕ್ಕೆ ಕಾಲಿಟ್ಟಿರುವ ಮುಂಗಾರು ಬುಧವಾರ ಕರ್ನಾಟಕ ಕರಾವಳಿ ಪ್ರವೇಶಿಸುವ ಸಾಧ್ಯತೆಯಿದೆ. ಆದರೆ ಚಂಡಮಾರುತ ಎದ್ದಿರುವ ಕಾರಣ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಒಂದೆರಡು ದಿನಗಳ ಬಿಡುವಿನ ಬಳಿಕ ಬಳಿಕ ಮಳೆ ಬಿರುಸು ಪಡೆಯಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನೀಲ್ ಗಾವಸ್ಕರ್ ತಿಳಿಸಿದ್ದಾರೆ. ಕಳೆದ ವರ್ಷವೂ ಮುಂಗಾರಿನ ಜತೆಜತೆಗೆ ಕಾಣಿಸಿಕೊಂಡ ‘ವಾಯು’ ಚಂಡಮಾರುತದ ಪರಿಣಾಮ ಮಳೆ ಬಿರುಸು ಪಡೆಯಲು ವಿಳಂಬವಾಗಿತ್ತು.

ಎನ್‌ಡಿಆರ್‌ಎಫ್ ಆಗಮನ:ಭಾರಿ ಮಳೆ, ಪ್ರವಾಹ ಸಂದರ್ಭ ಜನ-ಜಾನುವಾರುಗಳ ರಕ್ಷಣೆ, ತುರ್ತು ಕಾರ್ಯಾಚರಣೆ ಕುರಿತ ತರಬೇತಿ ಪಡೆದ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(ಎನ್‌ಡಿಆರ್‌ಎಫ್)ನ 25 ಸದಸ್ಯರ ತಂಡ ಮಂಗಳವಾರ ಮಂಗಳೂರಿಗೆ ಆಗಮಿಸಿದೆ. ಆಂಧ್ರದ ಗುಂಟೂರಿನ ಎನ್‌ಡಿಆರ್‌ಎಫ್ 10ನೇ ಬೆಟಾಲಿಯನ್ ಸದಸ್ಯರಾಗಿದ್ದು, ಟೀಮ್ ಕಮಾಂಡರ್ ಗೋಪಾಲ್ ಮೀನಾ ನೇತೃತ್ವ ವಹಿಸಿದ್ದಾರೆ. ಪಿಲಿಕುಳದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಕ್ಯಾಂಪ್ ಮಾಡಿದ್ದು, ದ.ಕ-ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಹೊಂದಿದೆ.

ಕಡಲಿನ ಅಬ್ಬರ ಜೋರು

ಉಳ್ಳಾಲ: ಸೋಮೇಶ್ವರ ಉಚ್ಚಿಲ, ಬಟ್ಟಪ್ಪಾಡಿ, ಉಳ್ಳಾಲ ಮೊಗವೀರ ಪಟ್ನ, ಕೈಕೋ, ಹಿಲರಿಯ ನಗರ, ಬೈಕಂಪಾಡಿ, ಚಿತ್ರಾಪುರ, ಸುರತ್ಕಲ್ ಪ್ರದೇಶಗಳಲ್ಲಿ ಕಡಲಿನ ಅಬ್ಬರ ಹೆಚ್ಚಿದೆ.

ಉಳ್ಳಾಲಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸರ್ಕಾರದಿಂದ ಯಾವ ಯೋಜನೆ ರೂಪಿಸಬೇಕು ಎಂಬುದರ ಕುರಿತು ಜಿಲ್ಲಾಧಿಕಾರಿ ಮತ್ತು ಬಂದರು ಇಲಾಖೆ, ಎಡಿಬಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ತಡೆಗೋಡೆ ನಿರ್ಮಾಣ ಮತ್ತು ತುರ್ತಾಗಿ ಯಾವ ಕಾರ್ಯ ಮಾಡಬೇಕು ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ಚಂದ್ರಹಾಸ್ ಉಳ್ಳಾಲ್, ಸಂತೋಷ್ ಕುಮಾರ್ ರೈ ಬೋಳಿಯಾರ್, ಚಂದ್ರಹಾಸ್ ಪಂಡಿತ್‌ಹೌಸ್, ಹೇಮಂತ್ ಶೆಟ್ಟಿ, ಚಂದ್ರಶೇಖರ್ ಉಚ್ಚಿಲ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಸೋಮೇಶ್ವರ ಪುರಸಭೆ ಅಧ್ಯಕ್ಷ ರಾಜೇಶ್ ಉಚ್ಚಿಲ, ತಲಪಾಡಿ ಗ್ರಾಪಂ ಅಧ್ಯಕ್ಷ ಸುರೇಶ್ ಆಳ್ವ, ತಾಪಂ ಸದಸ್ಯ ರವಿಶಂಕರ್ ಸೋಮೇಶ್ವರ, ನವೀನ್ ಪಾದಲ್ಪಾಡಿ, ಸೋಮೇಶ್ವರ ಪುರಸಭಾ ಆಯುಕ್ತೆ ವಾಣಿ ಆಳ್ವ, ಉಳ್ಳಾಲ ನಗರಸಭಾ ಆಯುಕ್ತ ರಾಯಪ್ಪ ಉಪಸ್ಥಿತರಿದ್ದರು.

ಕಡಲ್ಕೊರೆತದಿಂದಾಗಿ ಮೀನುಗಾರರಿಗೆ, ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿರುವ ಅನೇಕ ಕುಟುಂಬಗಳಿಗೆ ತೊಂದರೆ ಆದ ಹಿನ್ನೆಲೆಯಲ್ಲಿ ತುರ್ತಾಗಿ ತಡೆಗೋಡೆ ಮಾಡಬೇಕಾದ ಅಗತ್ಯವಿದೆ. 230 ಕೋಟಿ ರೂ. ಅನುದಾನದಲ್ಲಿ ಕಡಲ್ಕೊರೆತ ತಡೆ ಕಾಮಗಾರಿ ಪ್ರಗತಿಯಲ್ಲಿದೆ. ಮೀನುಗಾರರು ಸಂಕಷ್ಟದಿಂದ ಪಾರಾಗಬೇಕೆಂಬುದು ಸರ್ಕಾರದ ಆಶಯ. - ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net