

ಸಕಲೇಶಪುರ: ತಾಲೂಕಿನಲ್ಲಿ ಸೋಮವಾರ ಮಳೆಯ ಪ್ರಮಾಣ ಸಂಪೂರ್ಣ ಕಡಿಮೆಯಾಗಿದ್ದರೂ ಅನಾಹುತಗಳು ಮುಂದುವರಿದಿವೆ.
ಶನಿವಾರ, ಭಾನುವಾರ ಸುರಿದ ಮಳೆಯಿಂದಾಗಿ ತಾಲೂಕಿನಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಬಾಳ್ಳುಪೇಟೆಯ ಇಂದಿರಾನಗರದ ಪ್ರೇಮಾ ಎಂಬುವರ ಮನೆ ಮಳೆಯಿಂದ ಕುಸಿದಿದೆ. ತಾಲೂಕಿನ ಕ್ಯಾಮನಹಳ್ಳಿ ಗ್ರಾಮದ ಮುರುಗೇಶ್ ಎಂಬುವರ ಮನೆ ಗಾಳಿ ಮಳೆಗೆ ಕುಸಿದಿದೆ. ಜ್ಞಾನಜ್ಯೋತಿ ಪ್ರೌಢಶಾಲೆಯ ಮೇಲೆ ಭಾನುವಾರ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಆದರೆ ಶಾಲೆಗೆ ರಜೆ ಇದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ತಾಲೂಕಿನ ಶಿರಾಡಿಘಾಟ್ ರಸ್ತೆಯಲ್ಲಿ ಮಾರನಹಳ್ಳಿ ಸಮೀಪ ಮಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ನದಿ ದಡಕ್ಕೆ ಉರುಳಿ ಬಿದ್ದಿದ್ದು, ನದಿ ದಡದಲ್ಲಿದ್ದ ಮರಗಳಿದ್ದುದರಿಂದ ಲಾರಿ ನದಿಗೆ ಬೀಳದಂತೆ ತಡೆದಿವೆ. ಲಾರಿಯ ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ತಾಲೂಕಿನ ಹಿರದನಹಳ್ಳಿ ಗ್ರಾಮದ ರಘು ಎಂಬುವರ ಮನೆ ಮಳೆಯಿಂದ ಕುಸಿದಿದೆ. ಹೊಂಗಡಹಳ್ಳ ಗ್ರಾಮದ ಲೀಲಾ ಎಂಬುವರ ಮನೆ ಮಳೆಯಿಂದ ಹಾನಿಯಾಗಿದೆ. ಬಿಸಿಲೆ ಸಮೀಪದ ಉದಿನೂರು ಗ್ರಾಮದ ಚನ್ನೇಗೌಡ ಎಂಬುವರ ಮನೆ ಭಾರಿ ಮಳೆಗೆ ಕುಸಿದಿದೆ.
ತಾಲೂಕಿನ ಹೆತ್ತೂರು ಹೋಬಳಿಯಲ್ಲಿ ಸಹ ವ್ಯಾಪಕವಾಗಿ ಮರಗಳು ಉರುಳಿದ್ದು, ಅನೇಕ ಮನೆಗಳ ಛಾವಣಿಗಳು ಹಾರಿ ಹೋಗಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಿದ್ದು, ಪೂರೈಕೆಯನ್ನು ಸರಿಪಡಿಸಲು ಸೆಸ್ಕ್ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಸೋಮವಾರ ಸುರಿದ ಮಳೆಯ ಪ್ರಮಾಣ ಕಡಿಮೆಯಿದ್ದರೂ ಶನಿವಾರ, ಭಾನುವಾರ ಸುರಿದ ಮಳೆಯಿಂದಾಗಿ ಮಲೆನಾಡಿಗರು ತತ್ತರಿಸುವಂತಾಗಿದೆ.