ಪಿರಿಯಾಪಟ್ಟಣ ತಾಲೂಕಿನಲ್ಲಿ ಮಳೆ

RemasterDirector_1a5c03258
RemasterDirector_1a5c03258
Published on

ಪಿರಿಯಾಪಟ್ಟಣ: ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಶುಕ್ರವಾರ ಮುಂಜಾನೆ ಮತ್ತು ರಾತ್ರಿ ಉತ್ತಮ ಮಳೆಯಾಗಿದ್ದು, ರೈತರು ಸಂತಸಗೊಂಡಿದ್ದಾರೆ.

ಪಟ್ಟಣ ಸೇರಿದಂತೆ ತಾಲೂಕಿನ ಹುಣಸೆಕುಪ್ಪೆ, ಮುಮ್ಮಡಿ ಕಾವಲು, ಮೆಲ್ಲಹಳ್ಳಿ, ಕಂಪಲಾಪುರ, ಬೂದಿತಿಟ್ಟು, ಮಾಲಂಗಿ, ಆನೆಚೌಕೂರು ಅರಣ್ಯ ಪ್ರದೇಶ, ಹರವೇ ಮಲ್ಲರಾಜ ಪಟ್ಟಣ, ಪಾರೆ ಕೊಪ್ಪಲು, ಅಂಕನಹಳ್ಳಿ, ಮುತ್ತೂರು, ಬೇಗೂರು, ಮಾಗಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮುಂಜಾನೆ 4ರಿಂದ 6 ಗಂಟೆವರೆಗೆ ಮತ್ತು ರಾತ್ರಿ 10ರಿಂದ 12 ಗಂಟೆವರೆಗೆ ಉತ್ತಮ ಮಳೆಯಾಗಿದ್ದು, ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ರೈತರಲ್ಲಿ ಸಂತಸ ಮೂಡಿಸಿದೆ.

ಈ ವಾರದಲ್ಲಿ ಬಿದ್ದ ಎರಡನೇ ಮಳೆಯಾಗಿದ್ದು ಶುಂಠಿ, ತಂಬಾಕು, ಜೋಳ ಬಿತ್ತನೆ ಸೇರಿದಂತೆ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಈ ಹಿಂದೆ ಬಿತ್ತನೆ ಮಾಡಿದ್ದ ಶುಂಠಿ, ಮುಸುಕಿನ ಜೋಳ ಬೆಳೆಗಳಿಗೆ ಈ ಮಳೆ ವರದಾನವಾಗಿದೆ. ಜಮೀನುಗಳನ್ನು ಉಳುಮೆ ಮಾಡಿಕೊಂಡು ತಂಬಾಕು ನಾಟಿಗೆ ಸಿದ್ಧವಾಗಿದ್ದ ಬೆಳೆಗಾರರು ಶನಿವಾರ ಬೆಳಗ್ಗೆಯಿಂದಲೇ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವು ತಿಂಗಳಿಂದ ಮಳೆ ಇಲ್ಲದೆ ಬೋರ್‌ವೆಲ್‌ಗಳಲ್ಲೂ ಸಮರ್ಪಕವಾಗಿ ನೀರು ಸಿಗದೆ ತೋಟಗಾರಿಕೆಯ ಬೆಳೆಗಳಾದ ತೆಂಗು, ಬಾಳೆ, ಅಡಿಕೆ, ಕಾಫಿ, ಕರಿಮೆಣಸು ಬೆಳೆಗಳಿಗೆ ನೀರು ಹಾಯಿಸಲು ಪರಿತಪಿಸುತ್ತಿದ್ದ ರೈತರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ.

ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆಗಳಿದ್ದು ರೈತರು ಕೃಷಿ ಚಟುವಟಿಕೆಗಳಿಗೆ ಸಿದ್ಧರಾಗಿದ್ದಾರೆ. ಮಳೆ ಬಿದ್ದ ಕೂಡಲೇ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವುದರಿಂದ ಕೂಲಿಯಾಳುಗಳ ಕೊರತೆ ಕಾಡುತ್ತಿದ್ದು, ಕೆಲವು ಗ್ರಾಮಗಳಲ್ಲಿ ಮನೆಯಲ್ಲಿನ ಮಹಿಳೆಯರು, ಮಕ್ಕಳು ವೃದ್ಧರು ಸೇರಿದಂತೆ ಎಲ್ಲರೂ ತಂಬಾಕು ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net