

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಮಳೆ ಮೂರು ದಿನಗಳಿಂದ ಸುರಿಯುತ್ತಿದ್ದು, ಕಾವೇರಿ ನದಿ ತುಂಬಿ ಹರಿಯುತ್ತಿದೆ. ಇಲ್ಲಿಗೆ ಸಮೀಪದ ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆಯ ಹೊದ್ದೂರಿನ ಗ್ರಾಮದ ಬೊಳಿಬಾಣೆ ಎಂಬಲ್ಲಿ ರಸ್ತೆ ಜಲಾವೃತವಾಗಿದೆ. ಕಿರು ವಾಹನಗಳ ಸಂಚಾರ ಕಷ್ಟಕರವಾಗಿದ್ದು, ರಾತ್ರಿಯೂ ಮಳೆ ಸುರಿದರೆ ಮೂರ್ನಾಡು ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ.
ಸಮೀಪದ ಚೆರಿಯಪರಂಬುವಿನಲ್ಲೂ ರಸ್ತೆ ಜಲಾವೃತವಾಗಿ ನಾಪೋಕ್ಲು-ಕಲ್ಲುಮೊಟ್ಟೆ ಸಂಪರ್ಕ ರಸ್ತೆ ಕಡಿತಗೊಂಡಿದೆ. ಇಲ್ಲಿಗೆ ಸಮೀಪದ ಎಮ್ಮೆಮಾಡಿನಲ್ಲಿರುವ ಗದ್ದೆಗಳು ಕಾವೇರಿ ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿದೆ. ನದಿ ತಟದ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ಈ ಹಿಂದೆ ಕಂದಾಯ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದ್ದು, ಹಲವರು ಮನೆ ಖಾಲಿ ಮಾಡಿದ್ದಾರೆ. ಇನ್ನುಳಿದಂತೆ ಹಲವರ ಮನೆ ಜಲಾವೃತವಾಗುವ ಸಾಧ್ಯತೆಗಳಿವೆ. ಕೊಟ್ಟ ಮುಡಿಯಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಬಹುತೇಕ ಕಾಫಿ ತೋಟಗಳು ಪ್ರವಾಹದಲ್ಲಿ ಮುಳುಗಿದೆ.
ಚೇಲಾವರ ಗ್ರಾಮದ ಮುತ್ತಪ್ಪ ಅವರ ವಾಸದ ಮನೆ ಛಾವಣಿ ಗಾಳಿಗೆ ಹಾರಿ ಹೋಗಿದೆ. ಕುಂಜಿಲ ಗ್ರಾಮದ ಮುದ್ದಪ್ಪ, ಎಮ್ಮೆಮಾಡು ಗ್ರಾಮದ ಹುಸೇನ್ನರ್, ಕೋಣಂಜಗೆರಿ ಗ್ರಾಮದ ಕುಶಾಲಪ್ಪ ಅವರ ವಾಸದ ಮನೆಗಳು ಮಳೆಗೆ ಹಾನಿಯಾಗಿವೆ. ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗರು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.