ಚಂಡಮಾರುತದಿಂದ ಮಳೆ ಬಿರುಸು

chikrain
Published on

ಮಂಗಳೂರು/ಉಡುಪಿ: ಪೂರ್ವ ಕರಾವಳಿಯಲ್ಲಿ ಉಂಟಾಗಿರುವ ಗುಲಾಬ್ ಚಂಡಮಾರುತದಿಂದಾಗಿ ಮಳೆ ದೂರವಾಗಿ ಬಿಸಿಲ ಝಳ ಹೆಚ್ಚಾಗಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮತ್ತೆ ಮಳೆ ಬಿರುಸು ಪಡೆದಿದೆ. ಮಂಗಳವಾರವೂ ಕರಾವಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಮಳೆ ಮುಂದುವರಿಯುವ ಸಾಧ್ಯತೆಯಿದೆ.

ಸೋಮವಾರ ಬೆಳಗ್ಗೆ ಮೋಡ-ಬಿಸಿಲಿನ ವಾತಾವರಣವಿತ್ತು. ಆದರೆ ಆ ಬಳಿಕ ಬಿಸಿಲು ಮರೆಯಾಗಿ ಮಳೆಯ ವಾತಾವರಣ ಕಾಣಿಸಿಕೊಂಡಿದೆ. ಅಲ್ಲಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗಿದ್ದು, ಕೆಲವೆಡೆ ಜೋರಾದ ಗಾಳಿಯೊಂದಿಗೆ ಬಿಟ್ಟು ಬಿಟ್ಟು ಮಳೆ ಸುರಿದಿದೆ. ಗ್ರಾಮೀಣ ಭಾಗದಲ್ಲಿ ಮಳೆ ತುಸು ಹೆಚ್ಚಾಗಿತ್ತು. ಮಂಗಳೂರು, ಉಡುಪಿ ನಗರ ವ್ಯಾಪ್ತಿಯಲ್ಲೂ ಸಂಜೆ, ರಾತ್ರಿ ವೇಳೆಯಲ್ಲಿ ಮಳೆ ಬಿರುಸಿನಿಂದ ಸುರಿದಿದೆ.

ಬೆಳಗ್ಗಿನಿಂದ ಸಾಯಂಕಾಲದವರೆಗಿನ ಮಾಹಿತಿಯಂತೆ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯಲ್ಲಿ ಅತ್ಯಧಿಕ 47.5 ಮಿ.ಮೀ. ಮಳೆಯಾಗಿದೆ. ಕೊಕ್ಕಡ 36.5, ಮುಂಡಾಜೆ 36 ಮಿ.ಮೀ. ಮಳೆ ಸುರಿದಿದೆ. ಉಳಿದಂತೆ ಕಡಬ, ಸುಳ್ಯ ತಾಲೂಕಿನಲ್ಲೂ ಮಳೆ ಉತ್ತಮವಾಗಿತ್ತು. ಮಳೆಯಿಂದಾಗಿ ಉಷ್ಣಾಂಶವೂ ಇಳಿಕೆಯಾಗಿದ್ದು, ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 28.2 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 23.4ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net