

ಹುನಗುಂದ : ತಾಲೂಕಿನಾದ್ಯಂತ ಗುಡುಗು ಸಿಡಿಲಿನೊಂದಿಗೆ ಮಂಗಳವಾರ ಮಳೆ ಅರ್ಭಟಿಸಿದೆ. ಪಟ್ಟಣದ ಅಮರಾವತಿ ಅಂಡರ್ ಪಾಸ್‌ನಲ್ಲಿ ನೀರು ನಿಂತು ಕೆಲ ಸಮಯ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ಸಾರ್ವಜನಿಕ ಆಸ್ಪತ್ರೆಗೆ ಸ್ವಲ್ಪ ಪ್ರಮಾಣದ ನೀರು ನುಗ್ಗಿತು. ಸಿಬ್ಬಂದಿ ನೀರನ್ನು ಹೊರ ಹಾಕಿದರೂ ಆಸ್ಪತ್ರೆಯ ಕೆಲ ಭಾಗಗಳಲ್ಲಿ ನೀರಿನ ತೇವಾಂಶ ಕಂಡುಬಂದಿತು. ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ತಾಲೂಕಿನ ಹುನಗುಂದ, ಅಮೀನಗಡ ಮತ್ತು ಕರಡಿ ಹೋಬಳಿಗಳ ವ್ಯಾಪ್ತಿಯಲ್ಲಿ ಭಾನುವಾರ ಸಂಜೆಯಿಂದ ಸೋಮವಾರ ಬೆಳಗ್ಗೆ ವರೆಗೆ 41 ಮಿಲಿ ಮೀಟರ್‌ಮಳೆಯಾಗಿದೆ. ದಾಸಬಾಳ, ಚಿತ್ತವಾಡಗಿ, ಸೂಳೆಭಾವಿ, ಇಂದವಾರ ಹಾಗೂ ಗಂಜಿಹಾಳ ಗ್ರಾಮಗಳಲ್ಲಿ ತಲಾ ಒಂದೊಂದು ಮನೆ ಭಾಗಶಃ ಹಾನಿಯಾಗಿವೆ. ಕಮತಗಿ ಪಟ್ಟಣದ ಮನೆಯೊಂದರ ಮುಂಭಾಗ ನಿರ್ಮಿಸಿದ್ದ ಗೂಡಿಗೆ ನೀರು ನುಗ್ಗಿ 20 ಕೋಳಿಗಳು ಮೃತಪಟ್ಟಿವೆ.