

ಹುಬ್ಬಳ್ಳಿ: ನಗರದಲ್ಲಿ ಬುಧವಾರವೂ ಒಂದಿಷ್ಟು ಮಳೆ ಸುರಿಯಿತು. ಕೆಲವೇ ಹೊತ್ತಿನ ಜಡಿಮಳೆಗೆ ದಾಜಿಬಾನಪೇಟ ತುಳಜಾಭವಾನಿ ಸರ್ಕಲ್ ನಲ್ಲಿ ನಾಲಾ ತುಂಬಿ ಕೊಳಚೆ ರಸ್ತೆಯ ಮೇಲೆ ಹರಿಯಿತು.
ಇದರಿಂದ ಗಬ್ಬು ವಾಸನೆಯ ಜತೆಗೆ ಕೊಳಚೆ ನೀರಿನಲ್ಲಿ ವಾಹನ ಸವಾರರು, ಪಾದಚಾರಿಗಳು ಪರದಾಡಿದರು.
ಇಲ್ಲಿಯ ನಾಲಾಕ್ಕೆ ಕಬ್ಬಿಣದ ಜಾಲರಿ ಹಾಕಲಾಗಿದ್ದರೂ ಅದರ ತುಂಬ ರಟ್ಟು, ಥರ್ಮಾಕೋಲ್, ಕಾಗದ ಇತ್ಯಾದಿ ಕಸ ತುಂಬಿಕೊಂಡಿತ್ತು.
ಮಹಾನಗರ ಪಾಲಿಕೆ ಎಷ್ಟೇ ಮುಂಜಾಗ್ರತೆ ಕ್ರಮ ಕೈಗೊಂಡರು ಕಸ ಚೆಲ್ಲುವವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಒಂದಿಷ್ಟು ಮಳೆಯಾದರೂ ನಾಲಾ ತುಂಬಿ ಕೊಳಚೆ ಹೊರ ಹರಿಯುವುದು ಸಾಮಾನ್ಯವಾಗಿದೆ. ಜನರ ಪರದಾಟ ಕಾಯಂ ಎಂಬಂತಾಗಿದೆ.