ಇಡೀ ದಿನ ಸುರಿದ ಮಳೆಕೆಲವೆಡೆ ರಸ್ತೆ ಜಲಾವೃತ

IMG_20230719_203841_356-4.jpg
Published on

ಹುಬ್ಬಳ್ಳಿ: ತಡವಾಗಿ ಆರಂಭವಾಗಿರುವ ಮುಂಗಾರು ಈ ವರ್ಷ ಜುಲೈ ಮಧ್ಯದಲ್ಲಿ ಒಂದಿಷ್ಟು ಮಳೆಯ ಅನುಭವ ನೀಡುತ್ತಿದೆ.

ಬುಧವಾರ ಶುರುವಾಗಿರುವ ಪುಷ್ಯ ಮಳೆಯು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಉತ್ತಮವಾಗಿ ಸುರಿದಿದೆ.

ಕಳೆದ ಎರಡು ದಿನಗಳಿಂದ ಆಗಾಗ ಸುರಿಯುತ್ತಿದ್ದ ಮಳೆ ಬುಧವಾರ ಇಡೀ ದಿನ ಜಿಟಿಜಿಟಿ ಎಂದು ಸುರಿಯಿತು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು.

ನಗರದ ಹಲವು ಕಡೆಗಳಲ್ಲಿ ರಸ್ತೆಗಳು ಸಂಚಾರಕ್ಕೆ ಬರದಾಗಿವೆ. ಇಲ್ಲಿಯ ವಿದ್ಯಾನಗರ ಟೆಂಡರ್ ಶ್ಯೂರ್ ರಸ್ತೆ ಚೇತನಾ ಕಾಲೇಜು ಬಳಿಯ ರಸ್ತೆಯೊಂದು ಜಲಾವೃತವಾಗಿತ್ತು. ಸರಿಯಾಗಿ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದ ಕಾರಣ ಹೊಂಡಮಯವಾಗಿತ್ತು. ಅಕ್ಕಪಕ್ಕದ ರಸ್ತೆಗಳಲ್ಲಿಯೂ ಗಟಾರುಗಳು ತುಂಬಿಕೊಂಡಿವೆ.

ಕಾಂಕ್ರಿಟ್ ರಸ್ತೆಗಳ ಕಥೆ ಇದಾದರೆ, ಕಚ್ಚಾ ರಸ್ತೆಗಳು, ಇನ್ನೂ ಡಾಂಬರ್ ಕಾಣದ ರಸ್ತೆಗಳು ಕೆಸರುಮಯವಾಗಿವೆ. ಅಲ್ಲಲ್ಲಿ ಕಸದ ರಾಶಿಗಳು ರೋಗರುಜಿನಗಳ ಆತಂಕ ಹೆಚ್ಚಿಸಿವೆ.

ಇನ್ನು ಗ್ರಾಮೀಣ ಭಾಗದಲ್ಲಿ ಮಳೆಯ ನಿರೀೆಯಲ್ಲಿದ್ದ ರೈತರಲ್ಲಿ ಮಂದಹಾಸ ಮೂಡಿಸಿದೆ. ಮುಂಗಾರು ಬಿತ್ತನೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಆದರೂ, ಬಿತ್ತನೆಯಾಗಿರುವ ಬೆಳೆಗೆ ಇದು ಅನುಕೂಲವಾಗಿದೆ.

ಬುಧವಾರ ಸಂಜೆಯವರೆಗೆ ಹುಬ್ಬಳ್ಳಿ ತಾಲೂಕಿನಲ್ಲಿ 29.30 ಎಂಎಂ ಮಳೆಯಾಗಿದೆ. ಇದುವರೆಗೂ ಯಾವುದೇ ಹಾನಿ ಬಗ್ಗೆ ವರದಿಯಾಗಿಲ್ಲ ಎಂದು ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net