ನಗರದ ಅಲ್ಲಲ್ಲಿ ಮರ ಬಿದ್ದು ಹಾನಿ; ಬಿರು ಬೇಸಿಗೆಯಲ್ಲಿ ಮಳೆ- ಗಾಳಿಯ ರಭಸ

11 Dwd 4
Published on

ಧಾರವಾಡ: ಬಿರು ಬೇಸಿಗೆಯಿಂದ ತತ್ತರಿಸಿದ್ದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶನಿವಾರ ಸಂಜೆ ಸುರಿದ ಮಳೆ ತಂಪೆರೆಯಿತು. ಸಂಜೆ 4 ಗಂಟೆ ಸುಮಾರಿಗೆ ಏಕಾಏಕಿ ಸುರಿದ ಮಳೆ, ಬಿಸಿಲಿನ ತಾಪವನ್ನು ಕೊಂಚ ತಣ್ಣಗಾಗಿಸಿತು.
ರಭಸವಾದ ಗಾಳಿ ಬೀಸಿದ್ದರಿಂದ ಇನ್ನಷ್ಟು ಸುರಿಯಲಿದ್ದ ಮಳೆಯನ್ನು ದೂರವಾಗಿಸಿತು. ಮಳೆ- ಗಾಳಿಗೆ ನಗರದ ವಿವಿಧೆಡೆ ಮರಗಳು ಉರುಳಿಬಿದ್ದು, ಹಾನಿ ಸಂಭವಿಸಿದೆ.
ನಗರದ ಟಿಪ್ಪು ವೃತ್ತದಿಂದ ಕರ್ನಾಟಕ ಹೈಸ್ಕೂಲ್‌ಗೆ ಹೋಗುವ ರಸ್ತೆಯಲ್ಲಿ ಗಾಳಿಗೆ ತೆಂಗಿನ ಮರ ವಿದ್ಯುತ್ ತಂತಿಯ ಮೇಲೆ ಉರುಳಿಬಿದ್ದಿದೆ. ಇದರಿಂದ ವಿದ್ಯುತ್ ಕಂಬಗಳೂ ಬಾಗಿದ್ದು, ಪ್ರಾಣಹಾನಿ ಸಂಭವಿಸಿಲ್ಲ. ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಕಡಿತ ಮಾಡಲಾಗಿತ್ತು.
ಮತ್ತೊಂದೆಡೆ ಡಿ.ಸಿ. ಕಾಂಪೌ೦ಡ್‌ಗೆ ಹೊಂದಿಕೊ೦ಡು ನಿರ್ಮಿಸಲಾಗುತ್ತಿರುವ ಸ್ವಿಮ್ಮಿಂಗ್ ಪೂಲ್ ಕಾಂಪ್ಲೆಕ್ಸ್ನ ಕಟ್ಟಿಗೆಯ ಸೆಂಟ್ರಿAಗ್ ಗಾಳಿಗೆ ಉರುಳಿಬಿದ್ದಿದೆ. ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಖಾಸಗಿ ಬಸ್ ಜಖಂಗೊ೦ಡಿದೆ.
ಡಿಮ್ಹಾನ್ಸ್ ಎದುರಿನ ಬೃಹತ್ ಮರ ರಸ್ತೆಗೆ ಉರುಳಿದೆ. ಧಾರವಾಡ- ಬೆಳಗಾವಿ ಮುಖ್ಯ ರಸ್ತೆ ಇದಾಗಿದ್ದು, ಪ್ರಾಣಹಾನಿ ಸಂಭವಿಸಿಲ್ಲ. ಮರ ಕಟಾವು ಮಾಡಿ ತೆರವು ಮಾಡುವವರೆಗೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕಲ್ಯಾಣನಗರದಲ್ಲಿ ಗಾಳಿಗೆ ವಿದ್ಯುತ್ ಕಂಬಗಳು ಮರದ ಮೇಲೆ ಉರುಳಿಬಿದ್ದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net