ಅನ್ನದಾತನ ಮೊಗದಲ್ಲಿ ಹರ್ಷ ತಂದ ಮಳೆ

9 lxr rain
Published on

ವಿಜಯವಾಣಿ ಸುದ್ದಿಜಾಲ ಲಕ್ಷೆ್ಮೕಶ್ವರ

ತಾಲೂಕಿನಾದ್ಯಂತ ಗುರುವಾರ ಬೆಳಗ್ಗೆ ಮೂರ್ನಾಲ್ಕು ಗಂಟೆಗಳ ಕಾಲ ಸುರಿದ ಜಿಟಿಜಿಟಿ ಮಳೆಯಿಂದ ರೈತ ಸಮುದಾಯ ಹರ್ಷಗೊಂಡಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ತಿಂಗಳಿಂದ ರೈತ ಮುಗಿಲಿನತ್ತ ಮುಖ ಮಾಡುವಂತಹ ಸ್ಥಿತಿ ನಿರ್ವಣವಾಗಿತ್ತು. ಬಿತ್ತನೆ ಮಾಡಿದ್ದ ಹಾಗೂ ಬಿತ್ತನೆ ಮಾಡಲು ಸಜ್ಜಾಗಿದ್ದ ರೈತರು ತಲೆ ಮೇಲೆ ಕೈ ಹೊತ್ತು ಕೂತಿದ್ದರು. ಗುರುವಾರ ಹದವರ್ತಿ ಮಳೆಯಾಗಿದ್ದು, ನಿಟ್ಟುಸಿರು ಬಿಡುವಂತಾಗಿದೆ.

ಹೊಲಗಳಿಗೆ ತೆರಳಿದ್ದ ರೈತರು, ಕೂಲಿ ಕಾರ್ವಿುಕರು ಸಂತಸದಿಂದ ಮರಳಿದರು. ಕೃಷಿ ಚಟುವಟಿಕೆಗಳಿಗೆ ಈ ಮಳೆ ಉತ್ತಮವಾಗಿದ್ದರೂ ಹಳ್ಳ, ಕೆರೆಗಳು ಭರ್ತಿಯಾಗಲು ದೊಡ್ಡ ಪ್ರಮಾಣದ ಮಳೆ ಬರಬೇಕಿದೆ ಎನ್ನುತ್ತಾರೆ ರೈತರು.

ಇನ್ನೂ 5 ದಿನಗಳ ಕಾಲ ಮಳೆ ಇರಲಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಜನತೆ ಪ್ಲಾಸ್ಟಿಕ್ ಹಾಳೆ, ತಾಡಪತ್ರಿ, ಛತ್ರಿ, ಜರ್ಕಿನ್ ಖರೀದಿಗೆ ಮುಗಿಬಿದ್ದ ದೃಶ್ಯ ಕಂಡು ಬಂತು.

ಕಳೆ ತಂದ ವರುಣ: ಶಿರಹಟ್ಟಿ ಪಟ್ಟಣ ಹಾಗೂ ತಾಲೂಕಿನಾದ್ಯಂತ ಬುಧವಾರ ರಾತ್ರಿಯಿಂದ ಪ್ರಾರಂಭವಾದ ಮಳೆ ಗುರುವಾರ ಮಧ್ಯಾಹ್ನದವರೆಗೂ ಸುರಿಯಿತು. ಜಿಟಿಜಿಟಿ ಮಳೆಯಿಂದ ಜನತೆ ಮನೆಯಲ್ಲೇ ಕಾಲ ಕಳೆಯುವಂತಾಯಿತು. ತಡವಾಗಿಯಾದರೂ ಬಂದ ಮಳೆಯಿಂದ ರೈತ ಸಮೂಹ ನಿಟ್ಟುಸಿರುಬಿಟ್ಟಿದೆ.

ಜೂನ್ ತಿಂಗಳಲ್ಲಿ ಶೇ.35 ಮಳೆ ಕೊರತೆಯಿಂದ ಒಣಗುತ್ತಿದ್ದ ಬೆಳೆಗೆ ಗುರುವಾರ ಸುರಿದ ಮಳೆ ಜೀವಕಳೆ ತಂದಿದೆ. ಇನ್ನೂ ಶೇ. 30 ಬಿತ್ತನೆ ಬಾಕಿ ಇದ್ದು, ಶೇಂಗಾ, ಮೆಣಸಿನಕಾಯಿ, ಉಳ್ಳಾಗಡ್ಡಿ, ಗೋವಿನಜೋಳ, ಸೂರ್ಯಕಾಂತಿ ಮತ್ತಿತರ ಬೆಳೆಗಳನ್ನು ಬಿತ್ತನೆ ಮಾಡಬಹುದಾಗಿದೆ. ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಧನದಡಿ ಬೀಜ, ಕ್ರಿಮಿನಾಶಕ, ಕೃಷಿ ಪರಿಕರಗಳು ಲಭ್ಯವಿವೆ.| ಚಂದ್ರಶೇಖರ ನರಸಮ್ಮನವರ ಸಹಾಯಕ ಕೃಷಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net