

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಭಾನುವಾರ ದಿನವಿಡೀ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಕಂಡು ಬಂದು ಮಳೆ ಸುರಿದಿದೆ.
ಬೆಳ್ತಂಗಡಿ ತಾಲೂಕಿನ ನಾವೂರಿನಲ್ಲಿ ಅತ್ಯಧಿಕ 58 ಮಿ.ಮೀ. ಮಳೆಯಾಗಿದ್ದು, ಉಳಿದಂತೆ ಅರಸಿನಮಕ್ಕಿ, ಶಿಶಿಲ, ಉಜಿರೆ, ಸೇರಿದಂತೆ ಹಲವೆಡೆ ಉತ್ತಮ ಮಳೆ ಸುರಿದಿದೆ. ಕಡಬ, ಬಂಟ್ವಾಳ, ಪುತ್ತೂರು, ಮೂಡುಬಿದಿರೆ ತಾಲೂಕಿನಲ್ಲಿಯೂ ಮಳೆ ಉತ್ತಮವಾಗಿಯೇ ಸುರಿದಿದೆ. ಸುಳ್ಯ ತಾಲೂಕಿನ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಮಂಗಳೂರು ನಗರ ಹಾಗೂ ಹೊರವಲಯದಲ್ಲಿ ಮೋಡ ಹಾಗೂ ಬಿಸಿಲ ವಾತಾವರಣವಿತ್ತು. ಹಗಲು ವೇಳೆಯಲ್ಲಿ ಬಿಟ್ಟು ಬಿಟ್ಟು ಮಳೆಯಾಗಿದ್ದು, ರಾತ್ರಿ ವೇಳೆ ಸ್ವಲ್ಪ ಮಳೆ ಸುರಿದಿದೆ.
ಮುಂಗಾರು ಕೇರಳ ಪ್ರವೇಶದ ಮುನ್ಸೂಚನೆ ಹಿನ್ನೆಲೆಯಲ್ಲಿ ಜೂನ್ 1ರಿಂದ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಉತ್ತಮ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಿನದ ಗರಿಷ್ಠ ತಾಪಮಾನ 30.4 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 22.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ, ಭಾನುವಾರ ಹಲವೆಡೆ ಮಳೆ ಸುರಿದಿದೆ. ಬ್ರಹ್ಮಾವರ, ಕಾರ್ಕಳ, ಉಡುಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದೆ. ಭಾನುವಾರ ಬೆಳಗ್ಗಿನ ಅವಧಿ ಮತ್ತು ಮಧ್ಯಾಹ್ನ ಬಳಿಕ ಮೋಡ ಕವಿದ ವಾತವರಣದೊಂದಿಗೆ ಸಣ್ಣ ಪ್ರಮಾಣದಲ್ಲಿ ಮಳೆ ಇತ್ತು.
ವಿದ್ಯುತ್ ಶಾಕ್‌ಗೆ ತಾಯಿ, ಮಗು ಬಲಿ: ಬೆಳ್ತಂಗಡಿ: ಪಟ್ರಮೆ ಗ್ರಾಮದ ಕೊಡಂದೂರು ಎಂಬಲ್ಲಿ ಭಾನುವಾರ ಬೆಳಗ್ಗೆ ಪಂಪ್‌ಶೆಡ್‌ನಲ್ಲಿ ವಿದ್ಯುತ್ ಶಾಕ್ ಹೊಡೆದು ತಾಯಿ ಹಾಗೂ ಮಗ ಮೃತಟ್ಟಿದ್ದಾರೆ. ಕೊಡಂದೂರು ನಿವಾಸಿ ಹರೀಶ್ ಗೌಡ ಎಂಬುವರ ಪತ್ನಿ ಗೀತಾ ಕೆ.(30) ಹಾಗೂ ಪುತ್ರ ಭವಿಷ್(4) ಮೃತಪಟ್ಟವರು. ಕೋಡಂದೂರಲ್ಲಿರುವ ಮನೆಯಿಂದ ಒಂದು ಕಿ.ಮೀ.ದೂರದ ಬೋಳೊಡಿಕಜೆ ಎಂಬಲ್ಲಿರುವ ತೋಟ ಮತ್ತು ದನಗಳನ್ನು ಕಟ್ಟುವ ಶೆಡ್‌ಗೆ ಭಾನುವಾರ ಬೆಳಗ್ಗೆ ಗೀತಾ ಕಿರಿಯ ಮಗ ಭವಿಷ್ ಮತ್ತು ಪತಿಯ ಅಣ್ಣನ ಪತ್ನಿ ದಿವ್ಯಾ ಜತೆ ತೆರಳಿದ್ದರು. ಕೊಟ್ಟಿಗೆಯಲ್ಲಿರುವ ದನ ಕರುಗಳಿಗೆ ಹುಲ್ಲು ಕೊಯ್ದು ಹಾಕಿ, ಜಾನುವಾರುಗಳಿಗೆ ಕುಡಿಯಲು ನೀರು ನೀಡುವ ಸಲುವಾಗಿ ಪಂಪ್ ಆನ್ ಮಾಡಲು ಸ್ವಿಚ್ ಬೋರ್ಡ್‌ಗೆ ಕೈಹಾಕುತ್ತಿದ್ದಂತೆ ತಾಯಿ ಹಾಗೂ ಮಗು ವಿದ್ಯುತ್ ಶಾಕ್‌ಗೆ ಒಳಗಾದರು. ಇವರ ಬೊಬ್ಬೆ ಕೇಳಿ ಕೊಟ್ಟಿಗೆ ಸಮೀಪವೇ ಇದ್ದ ದಿವ್ಯಾ ಹಾಗೂ ಸ್ಥಳೀಯರಾದ ಹಸೈನಾರ್ ಸ್ಥಳಕ್ಕೆ ಧಾವಿಸಿ ರಕ್ಷಣೆಗೆ ಮುಂದಾದರೂ, ಜೀವ ಉಳಿಸಲಾಗಲಿಲ್ಲ. ಗೀತಾ ಪತಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.