ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಂಪೆರೆದ ಮಳೆ

male
Published on

ಮಂಗಳೂರು: ಬಿಸಿಲ ಬೇಗೆಯಿಂದ ತತ್ತರಿಸಿದ್ದ ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಶನಿವಾರ ಸುರಿದ ಉತ್ತಮ ಮಳೆ ತಂಪಿನ ಅನುಭವ ನೀಡಿದೆ.

ಮಂಗಳೂರು ನಗರ ಹಾಗೂ ಹೊರವಲಯದಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಆರಂಭಗೊಂಡ ಮಿಂಚು ಸಹಿತ ಸಾಧಾರಣ ಮಳೆ ಶನಿವಾರ ಬೆಳಗ್ಗೆ 8ರ ತನಕ ಮುಂದುವರಿಯಿತು. ಸುರತ್ಕಲ್, ಉಳ್ಳಾಲ, ದೇರಳಕಟ್ಟೆ ಮೊದಲಾದೆಡೆ ಧಾರಾಕಾರ ಮಳೆಯಾಗಿ ತೋಡುಗಳಲ್ಲಿ ನೀರು ಹರಿದಿದೆ. ಹಗಲಿನಲ್ಲಿ ಭಾರಿ ಸೆಕೆ ಇತ್ತು.

ಸುಬ್ರಹ್ಮಣ್ಯದಲ್ಲಿ ಮಧ್ಯಾಹ್ನ ಬಳಿಕ ಉತ್ತಮ ಮಳೆಯಾಗಿದೆ. ಸುಳ್ಯ ಪರಿಸರದಲ್ಲಿ ಬೆಳಗ್ಗೆ ಮೋಡ, ಮಧ್ಯಾಹ್ನ ಸಾಧಾರಣ ಹನಿಮಳೆ, ಸಂಜೆ ಮೋಡ ಕವಿದ ವಾತಾವರಣ, ಬಂಟ್ವಾಳದಲ್ಲಿ ಬೆಳಗ್ಗೆ ತುಂತುರು ಮಳೆ, ಬಳಿಕ ಬಿಸಿಲು, ಸಾಯಂಕಾಲ ಮೋಡಕವಿದ ವಾತಾವರಣವಿತ್ತು.

ಮೂಡುಬಿದಿರೆ, ಶಿರ್ತಾಡಿ ಪರಿಸರದಲ್ಲಿ ಬೆಳಗ್ಗೆಯಿಂದ ಮೋಡ ಕವಿದು ಆಗಾಗ ತುಂತುರು ಮಳೆಯಾಗಿದೆ. ವಿಟ್ಲದಲ್ಲಿ ದಟ್ಟ ಮೋಡ ಕವಿದು ಸಂಜೆಯ ವೇಳೆಗೆ ತುಂತುರು ಮಳೆಯಾಗಿದೆ. ಪುತ್ತೂರು, ಕಡಬ ಪರಿಸರದಲ್ಲಿ ತುಂತುರು ಮಳೆಯಾಗಿದೆ. ಬೆಳ್ತಂಗಡಿಯಲ್ಲಿ ಮೋಡ, ಬಿಸಿಲಿನ ವಾತಾವರಣವಿತ್ತು.

ಕಾರ್ಕಳ ಹಾಗೂ ಪಡುಬಿದ್ರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ತಡರಾತ್ರಿ ಗುಡುಗು ಸಹಿತ ತುಂತುರು ಮಳೆಯಾಗಿದೆ. ಶನಿವಾರ ದಿನವಿಡೀ ಬಿಸಿಲು ಹಾಗೂ ಸಾಯಂಕಾಲ ಮೋಡ ಕವಿದ ವಾತಾವರಣವಿತ್ತು. ಕಾರ್ಕಳ ತಾಲೂಕಿನ ಕೆಲ ಭಾಗಗಳಲ್ಲಿ ಸಾಯಂಕಾಲ ಮಳೆ ಸುರಿದಿದೆ.

ಇನ್ನೂ ನಾಲ್ಕು ದಿನ ಮಳೆ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಒಳನಾಡು ಮತ್ತು ಕರಾವಳಿಯ ಕೆಲವೆಡೆ ಏ.29ರ ತನಕ ಗುಡುಗು ಸಹಿತ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ. ವಾತಾವರಣದಲ್ಲಿ ಬಿಸಿ ಗಾಳಿ ಸಾಂಧ್ರತೆ ಕಡಿಮೆಯಾಗಿದ್ದು, ಇದು ಭೂಮಿಯಿಂದ ಮೇಲಕ್ಕೆ ಹೋದಂತೆ ಶಾಖಕ್ಕೆ ಮೋಡ ಕರಗಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರಿನಲ್ಲಿ ಕನಿಷ್ಠ 25 ಹಾಗೂ ಗರಿಷ್ಠ 37.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೆಳಗ್ಗೆ 8.30ಕ್ಕೆ ವರದಿಯಾದಂತೆ 24 ಗಂಟೆ ಅವಧಿಯಲ್ಲಿ 24.5 ಮಿ.ಮೀ. ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net