ಕೊಂಚ ತಗ್ಗಿದ ನೆರೆ

rain
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ಭಾನುವಾರವೂ ಮುಂದುವರಿದಿತ್ತು. ಹವಾಮಾನ ಇಲಾಖೆ ಸೋಮವಾರ ಬೆಳಗ್ಗಿನ ತನಕ ಭಾರಿ ಮಳೆ ಸುರಿಯುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಮುಂದುವರಿಸಿದೆ.

ಶನಿವಾರ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ನೇತ್ರಾವತಿ ನದಿ ನೀರು ಭಾನುವಾರ ಇಳಿಮುಖವಾಗಿದೆ. ಬೆಳಗ್ಗೆ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದ್ದು 6.4ಮೀಟರ್‌ಗೆ ಇಳಿದಿದೆ. ಘಟ್ಟ ಪ್ರದೇಶದಲ್ಲಿ ಸುರಿಯುವ ಮಳೆ ಹಾಗೂ ನೀರಿನ ಹರಿವು ಹೊಂದಿಕೊಂಡು ನೇತ್ರಾವತಿ ನದಿಯ ಹರಿವು ಬಂಟ್ವಾಳದಲ್ಲಿ ಏರಿಳಿತವಾಗುತ್ತದೆ ಎಂದು ತಹಸೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ. ಉಪ್ಪಿನಂಗಡಿಯಲ್ಲಿ ಹರಿಯುವ ಕುಮಾರಧಾರಾ ಮತ್ತು ನೇತ್ರಾವತಿ ನದಿಯ ಜಲಮಟ್ಟ ಭಾನುವಾರ 3 ಮೀ. ಇಳಿದಿದೆ. ನೇತ್ರಾವತಿ ನದಿ ಶನಿವಾರ ಅಪಾಯದ ಮಟ್ಟ ಸಮುದ್ರ ಮಟ್ಟದಿಂದ 26.5 ಮೀ. ಎತ್ತರವನ್ನು ಮೀರಿ ಹರಿಯುತ್ತಿದ್ದು, ಭಾನುವಾರ ಬೆಳಗ್ಗೆ 24 ಮೀಟರ್ ಇದ್ದು, ಸಂಜೆಯ ಹೊತ್ತಿಗೆ 23 ಮೀಟರ್‌ಗೆ ಇಳಿಕೆಯಾಗಿದೆ.

ಬೆಳ್ತಂಗಡಿ, ಕಿನ್ನಿಗೋಳಿ, ಬಂಟ್ವಾಳ ಮೊದಲಾದ ಕಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ವಿವಿಧ ಕಡೆ ಮನೆ, ಕೃಷಿಗೆ ಹಾನಿ ಸಂಭವಿಸಿದೆ. ದಟ್ಟ ಮೋಡ ಕವಿದು ದಿನವಿಡೀ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಜನರ ಓಡಾಟ ಕಡಿಮೆಯಾಗಿತ್ತು.

ಪುತ್ತೂರು ನಿಡ್ಪಳ್ಳಿ ಗ್ರಾಮದ ಪಟ್ಟೆ ಎಂಬಲ್ಲಿ ತೋಡಿನ ಬದಿಯ ಗುಡ್ಡ ಕುಸಿದು ಸಂಭವಿಸಿದ ಕೃತಕ ನೆರೆಯಿಂದಾಗಿ ಕೃಷಿ ಭೂಮಿಗೆ ಮಳೆನೀರು ನುಗ್ಗಿ ಅಪಾರ ನಷ್ಟವಾಗಿದೆ. ಪಾಣಾಜೆ ಗ್ರಾಮ ವ್ಯಾಪ್ತಿಯಲ್ಲಿ ಪುತ್ತೂರು-ಪಾಣಾಜೆ-ಸ್ವರ್ಗ ರಸ್ತೆಯ ಬದಿಯ ದರೆ ಕುಸಿದು ರಸ್ತೆಗೆ ಬಿದ್ದಿದ್ದು, ರಸ್ತೆಯ ಮೇಲ್ಭಾಗದಲ್ಲಿರುವ ಉಮ್ಮರ್ ಎಂಬುವರ ಮನೆ ಕುಸಿದು ಬೀಳುವ ಸ್ಥಿತಿಯಲ್ಲಿದೆ.

ಕಡಲ್ಕೊರೆತ ಹೆಚ್ಚಳ: ಸೋಮೇಶ್ವರ, ತಣ್ಣೀರು ಬಾವಿ, ಪಣಂಬೂರು, ಮೀನಕಳಿಯ, ಚಿತ್ರಾಪುರದಲ್ಲಿ ಮಳೆಯ ಅಬ್ಬರದಿಂದ ಕಡಲ್ಕೊರೆತ ತೀವ್ರವಾಗಿದೆ. ಹೊಯ್ಗೆ ಬಜಾರ್‌ನಲ್ಲಿ ಕಡಲ್ಕೊರೆತ ತೀವ್ರವಾದ ಪರಿಣಾಮ ಶಿಳ್ಳೆ ಜನಾಂಗದ ಮೀನುಗಾರರ 15 ಕುಟುಂಬಗಳ 40 ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

12ರವರೆಗೂ ಉತ್ತಮ ಮಳೆ: ಆ.12ರ ತನಕವೂ ಉತ್ತಮ ಮಳೆ ಮುಂದುವರಿಯಲಿದೆ. ಅಪಾಯದಂಚಿನಲ್ಲಿರುವ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಾಕೃತಿಕ ವಿಕೋಪ ಎದುರಿಸಲು ಎನ್‌ಡಿಆರ್‌ಎಫ್, ಗೃಹರಕ್ಷಕ ದಳ, ಅಗ್ನಿಶಾಮಕದಳ 24*7 ಸನ್ನದ್ಧವಾಗಿದೆ. ಕಂದಾಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ತಕ್ಷಣ ಸ್ಪಂದಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

ವಾರದಿಂದ ಮುಳುಗಿರುವ ಸ್ನಾನಘಟ್ಟ: ಸುಬ್ರಹ್ಮಣ್ಯ: ಪರಿಸರದಲ್ಲಿ ಐದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಭಾನುವಾರವೂ ಸ್ಥಿತಿಯನ್ನು ಕಾಯ್ದುಕೊಂಡಿದೆ.

ಬೆಳಗ್ಗಿನ ವೇಳೆ ಕಡಿಮೆಯಾಗಿದ್ದ ಮಳೆ ಮಧ್ಯಾಹ್ನ ನಂತರ ಬಿರುಸಾಯಿತು. ಆದರೆ ಘಟ್ಟ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾದ ಕಾರಣ ಕುಮಾರಧಾರಾ ನದಿಯಲ್ಲಿ ಭಾನುವಾರ ಬೆಳಗ್ಗೆ ಪ್ರವಾಹ ಕಡಿಮೆಯಾಗಿತ್ತು. ಆದರೆ ಮಧ್ಯಾಹ್ನ ನಂತರ ಸುರಿದ ಭಾರಿ ಮಳೆಗೆ ಮತ್ತೆ ಪ್ರವಾಹ ಏರಿಕೆಯಾಗಿದೆ. ಕುಮಾರಧಾರಾ ಸ್ನಾನಘಟ್ಟ ಒಂದು ವಾರದಿಂದ ಮುಳುಗಿದ ಸ್ಥಿತಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net