

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಚುರುಕುಗೊಂಡಿರುವ ಮಳೆ ಶನಿವಾರ ಮತ್ತಷ್ಟು ಬಿರುಸಾಗಿದೆ.
ಶುಕ್ರವಾರ ರಾತ್ರಿಯಿಡೀ ಧಾರಾಕಾರವಾಗಿ ಸುರಿದಿದೆ. ಶನಿವಾರ ಬೆಳಗ್ಗೆ ಕೆಲಕಾಲ ತುಸು ಬಿಸಿಲು-ಮೋಡದ ವಾತಾವರಣ ಇತ್ತು. ಮಧ್ಯಾಹ್ನ ವೇಳೆಗೆ ಮತ್ತೆ ಮೋಡಗಳು ದಟ್ಟೈಸಿ ರಾತ್ರಿವರೆಗೂ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕೃಷಿ ಚಟುವಟಿಕೆಗಳು ಚುರುಕು ಪಡೆದಿವೆ.
ಶನಿವಾರ ಬೆಳಗ್ಗೆ ವರದಿಯಾದಂತೆ ಹಿಂದಿನ 24 ಗಂಟೆಗಳಲ್ಲಿ ಬೆಳ್ತಂಗಡಿ 45, ಬಂಟ್ವಾಳ 55, ಮಂಗಳೂರು 46, ಪುತ್ತೂರು 52.4, ಸುಳ್ಯ 45.2, ಮೂಡುಬಿದಿರೆ 52.7, ಕಡಬ 42.6 ಮಿ.ಮೀ. ಮಳೆಯಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಮೂಲ್ಕಿಯಲ್ಲಿ(160 ಮಿ.ಮೀ) ಬಿದ್ದಿದೆ. ಮಾಣಿಯಲ್ಲೂ 90 ಮಿ.ಮೀ ಆಗಿದೆ.
ಉಡುಪಿ 44.8, ಬ್ರಹ್ಮಾವರ 49.7, ಕಾಪು 64.0, ಕುಂದಾಪುರ 53.1, ಬೈಂದೂರು 32.5, ಕಾರ್ಕಳ 43.2, ಹೆಬ್ರಿ 49.4 ಮಿ.ಮೀ. ಸಹಿತ ಉಡುಪಿ ಜಿಲ್ಲೆಯಲ್ಲಿ ಸರಾಸರಿ 47.2 ಮಿ.ಮೀ. ಮಳೆ ದಾಖಲಾಗಿದೆ.
ಇಂದು ಆರೆಂಜ್ ಅಲರ್ಟ್: ಮಳೆಯ ತೀವ್ರತೆ ಇದೇ ರೀತಿ ಮುಂದುವರಿಯಲಿದ್ದು, ಮುಂದಿನ ಎರಡು ದಿನಕ್ಕೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಸಮುದ್ರದಲ್ಲೂ ಗಾಳಿ ವೇಗವಾಗಿ ಬೀಸುವ ಸಾಧ್ಯತೆ ಇದ್ದು ಮೀನುಗಾರರಿಗೂ ಮುನ್ನೆಚ್ಚರಿಕೆ ನೀಡಲಾಗಿದೆ.
ಆವರಣ ಗೋಡೆ ಕುಸಿದು ಮನೆ ಜಖಂ
ಬಂಟ್ವಾಳ: ಭಾರಿ ಮಳೆಗೆ ಕಲ್ಲಗುಡ್ಡೆಯ ಸೋಮನಾಥ ಕುಲಾಲ್ ಎಂಬುವರ ಮನೆ ಮೇಲೆ ಮಣ್ಣು ಸಹಿತ ಆವರಣ ಗೋಡೆ ಕುಸಿದು ಬಿದ್ದಿದ್ದು, ಮನೆಯವರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಶುಕ್ರವಾರ ತಡರಾತ್ರಿ 12.30ರ ವೇಳೆಗೆ ಪಕ್ಕದ ತಡೆಗೋಡೆ ಮನೆ ಮೇಲೆ ಕುಸಿದಿದೆ. ಮನೆ ಸಂಪೂರ್ಣ ಜಖಂಗೊಂಡಿದ್ದು, ಗೋಡೆಗಳು ಕುಸಿದು ವಾಲಿ ನಿಂತಿವೆ. ಫ್ಯಾನ್ ಮತ್ತಿತರ ವಿದ್ಯುತ್ ಉಪಕರಣಗಳು, ಹೊರಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೂ ಹಾನಿಯಾಗಿದೆ. ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಪುರಸಭಾ ಸದಸ್ಯ ಗಂಗಾಧರ್ ಪೂಜಾರಿ, ಪ್ರಮುಖರಾದ ರಮಾನಾಥ ಪೈ ಮೊದಲಾದವರು ಭೇಟಿ ನೀಡಿದ್ದಾರೆ.