

ಭರತ್ ಶೆಟ್ಟಿಗಾರ್ ಮಂಗಳೂರು
ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಸುರಿದ ಮಳೆ ಹಿಂಗಾರಿನಲ್ಲಿ ತೀವ್ರತೆ ಹೆಚ್ಚಿಸಿಕೊಂಡು ನಿರಂತರವಾಗಿ ಸುರಿಯುತ್ತಿದೆ. ಈ ಮೊದಲು ಹವಾಮಾನ ಇಲಾಖೆ, ಹಿಂಗಾರಿನಲ್ಲಿ ಸಾಮಾನ್ಯ ಮಳೆ ಸುರಿಯುವುದಾಗಿ ತಿಳಿಸಿತ್ತು. ಆದರೆ ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತಗಳು ಮಳೆಯ ಪ್ರಮಾಣ ಹಚ್ಚಿಸಿವೆ.
ನ.21ರವರೆಗಿನ ಅಂಕಿ ಅಂಶದಂತೆ ಕರಾವಳಿಯಲ್ಲಿ ಈ ಬಾರಿ ವಾಡಿಕೆಗಿಂತ ಶೇ.118ರಷ್ಟು ಅಧಿಕ ಹಿಂಗಾರು ಮಳೆಯಾಗಿದೆ. ಇಲ್ಲಿವರೆಗಿನ ವಾಡಿಕೆ 2.40 ಸೆಂ.ಮೀ. ಮಳೆ ಸುರಿಯಬೇಕಾದಲ್ಲಿ 5.23 ಸೆಂ.ಮೀ. ಮೀರಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7.65 ಸೆಂ.ಮೀ. ಮಳೆಯಾಗಿದ್ದು, ವಾಡಿಕೆ ಮಳೆ 3.47 ಸೆಂ.ಮೀ. ಅಂದರೆ ಶೇ.121ರಷ್ಟು ಅಧಿಕ ಮಳೆ ಸುರಿದಿದೆ. ಉಡುಪಿ ಜಿಲ್ಲೆಯಲ್ಲಿ ವಾಡಿಕೆ 2.84 ಸೆಂ.ಮೀ. ಮಳೆ ಸುರಿಯಬೇಕಾದಲ್ಲಿ 6.77 ಸೆಂ.ಮೀ. ಮಳೆ ಸುರಿದಿದ್ದು, ಇದು ಶೇ.139ರಷ್ಟು ಅಧಿಕ. ಘಟ್ಟದ ತಪ್ಪಲಿನ ಬೆಳ್ತಂಗಡಿ, ಸುಳ್ಯ, ಕಬಡ, ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದೆ.
ಕಳೆದ ವರ್ಷವೂ ಉತ್ತಮ: 2020ರಲ್ಲೂ ಹಿಂಗಾರು ಉತ್ತಮವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5.09 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.35ರಷ್ಟು ಹೆಚ್ಚು ಸುರಿದಿದೆ. ಉಡುಪಿ ಜಿಲ್ಲೆಯಲ್ಲಿ 4.16 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.33ರಷ್ಟು ಅಧಿಕ ಮಳೆಯಾಗಿದೆ. ಕಳೆದ ವರ್ಷವೂ ಮುಂಗಾರು ಅವಧಿಯಲ್ಲಿ ಉಭಯ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿತ್ತು.
ಮುಂಗಾರಿನಲ್ಲಿ ಕೊರತೆ: ಈ ಬಾರಿಯ ಮುಂಗಾರಿನಲ್ಲಿ ದ.ಕ. ಜಿಲ್ಲೆಯಲ್ಲಿ ಶೇ.27 ಮತ್ತು ಉಡುಪಿಯಲ್ಲಿ ಶೇ.14ರಷ್ಟು ಮಳೆ ಕೊರತೆಯಾಗಿದೆ. ದ.ಕ. ಜಿಲ್ಲೆಯಲ್ಲಿ 24.78 ಸೆಂ.ಮೀ.(ವಾಡಿಕೆ-33.88 ಸೆಂ.ಮೀ) ಮತ್ತು ಉಡುಪಿಯಲ್ಲಿ 34.44 ಸೆಂ.ಮೀ.(ವಾಡಿಕೆ-40.22 ಸೆಂ.ಮೀ.) ಮಳೆಯಾಗಿದೆ. ಜನವರಿಯಿಂದ ಇಲ್ಲಿವರೆಗಿನ ವಾರ್ಷಿಕ ಮಳೆ ಲೆಕ್ಕಾಚಾರದಂತೆ 39.10 ಸೆಂ.ಮೀ. ಮಳೆಯಾಗಿದ್ದು, ವಾಡಿಕೆ 39.77 ಸೆಂ.ಮೀ.ಗಿಂತ ಶೇ.2ರಷ್ಟು ಕಡಿಮೆ ಸುರಿದಿದೆ. ಉಡುಪಿಯಲ್ಲಿ 45.07 ಸೆಂ.ಮೀ. ವಾಡಿಕೆ ಮಳೆ ಸುರಿಯಬೇಕಾದಲ್ಲಿ ಶೇ.5ರಷ್ಟು ಅಧಿಕ ಅಂದರೆ 47.37 ಸೆಂ.ಮೀ. ಮಳೆಯಾಗಿದೆ.
ತಾಲೂಕುವಾರು ಹಿಂಗಾರು ಮಳೆ ಮಾಹಿತಿ: ತಾಲೂಕು ಸುರಿದ ಮಳೆ (ಸೆಂ.ಮೀ.) ಶೇ. ಹೆಚ್ಚಳ
ಬೆಳ್ತಂಗಡಿ 8.73 140
ಬಂಟ್ವಾಳ 5.81 94
ಮಂಗಳೂರು 6.14 135
ಪುತ್ತೂರು 6.37 77
ಸುಳ್ಯ 8.13 121
ಮೂಡುಬಿದಿರೆ 7.35 136
ಕಡಬ 8.97 134
ಕಾರ್ಕಳ 7.57 95
ಕುಂದಾಪುರ 5.90 184
ಉಡುಪಿ 7.01 181
ಬೈಂದೂರು 5.43 126
ಬ್ರಹ್ಮಾವರ 6.44 123
ಕಾಪು 7.40 161
ಹೆಬ್ರಿ 8.75 191
ವಾಯುಭಾರ ಕುಸಿತ ಪರಿಣಾಮ ಈ ಬಾರಿ ಹಿಂಗಾರು ಅವಧಿಯಲ್ಲಿ ಕರಾವಳಿ ಭಾಗದಲ್ಲಿ ಮಳೆ ಉತ್ತಮವಾಗಿದೆ. ಆದರೆ ಈ ಮಳೆ ಕಡಿಮೆಯಾಗುವ ಲಕ್ಷಣಗಳು ಸದ್ಯ ಗೋಚರಿಸಿದ್ದು, ರಾತ್ರಿ ವೇಳೆ ಅಲ್ಲಲ್ಲಿ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ.
ಸುನೀಲ್ ಗಾವಸ್ಕರ್, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ