ಕರಾವಳಿಯ ಗ್ರಾಮೀಣ ಭಾಗದಲ್ಲಿ ಮಳೆ

rain
Published on

ಮಂಗಳೂರು: ಕರಾವಳಿಯಾದ್ಯಂತ ಶುಕ್ರವಾರ ಮಧ್ಯಾಹ್ನ ವರೆಗೆ ಪ್ರಖರ ಬಿಸಿಲು ಸಹಿತ ಒಣಹವೆ ಮುಂದುವರಿದಿದ್ದು, ಸಂಜೆ ವೇಳೆ ಹಲವಡೆ ಮಳೆಯಾಗಿದೆ.
ಬೆಳಗ್ಗೆ ಕೆಲವು ಹೊತ್ತು ಮೋಡ ಕವಿದಿದ್ದರೂ, ನಂತರ ಪ್ರಖರ ಬಿಸಿಲಿನೊಂದಿಗೆ ಒಣಹವೆ ಇತ್ತು. ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಸರಾಸರಿ 37.9 ಡಿಗ್ರಿ ಗರಿಷ್ಠ, 24.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ರಾತ್ರಿ 23.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಠಾಂಶ ದಾಖಲಾಗಿರುವುದರಿಂದ ರಾತ್ರಿ ಪೂರ್ತಿ ಒಣ ಚಳಿ ಮುಂದುವರಿದಿತ್ತು. ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಸುಬ್ರಹ್ಮಣ್ಯ ಭಾಗದಲ್ಲಿ ಗುಡುಗು, ಸಿಡಿಲಿನ ಜತೆಯಲ್ಲಿ ಸಾಮಾನ್ಯ ಮಳೆ ಇಳೆಯನ್ನು ತಣಿಸಿದೆ. ಆದರೆ ಈ ಭಾಗ ಬಿಟ್ಟರೆ ಉಳಿದ ಕಡೆಯಲ್ಲಿ ಪ್ರಖರ ಬಿಸಿಲು ಸಹಿತ ಒಣಹವೆ ಮುಂದುವರಿದಿದೆ. ಬೆಳಗ್ಗೆ ಕೆಲವು ಹೊತ್ತು ಮೋದ ಕವಿದಿದ್ದರೂ ನಂತರ ಪ್ರಖರ ಬಿಸಿಲಿನೊಂದಿಗೆ ಒಣಹವೆ ಇತ್ತು.
ಸುಳ್ಯದ ಬಳ್ಪ, ಸುಬ್ರಹ್ಮಣ್ಯ, ಕೇನ್ಯ, ಪಟೋಳಿ, ಕುಕ್ಕುಜಡ್ಕ, ದುಗ್ಗಲಡ್ಕ, ಉಬರಡ್ಕದಲ್ಲಿ ತುಂತುರು ಜತೆಗೆ ಸಾಮಾನ್ಯ ಮಳೆಯಾಗಿದೆ.ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಸರಾಸರಿ 38.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ರಾತ್ರಿ ಮಳೆ ಕಾಡು ಹಾಗೂ ಪಶ್ಚಿಮಘಟ್ಟದ ಹಲವಡೆ ಹೆಚ್ಚಿನ ಪ್ರಮಾಣದ ಮೋಡ ಕವಿದ ವಾತಾವರಣ ಕಂಡುಬಂದಿದೆ.
ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಕಂಡುಬಂದಿದೆ. ಶನಿವಾರ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣ ಮುನ್ಸೂಚನೆಯಿದ್ದು, ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಒಣ ಹವೆ ಮುಂದುವರಿಯಲಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣ ಮುನ್ಸೂಚನೆ ಇದೆ. ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರದ ಮುನ್ಸೂಚನೆಯಂತೆ ಏ.13ರಿಂದ ಮುಂದಿನ ವಾರ ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net