

ತೀರ್ಥಹಳ್ಳಿ: ತಾಲೂಕಿನಲ್ಲಿ ಶುಕ್ರವಾರ ಬೆಳಗಿನವರೆಗೆ 95.6 ಮಿಮೀ ಮಳೆಯಾಗಿದೆ. ಆಗುಂಬೆ, ಆಗ್ರಹಾರ ಹೋಬಳಿಯ ಕೆಲವು ಭಾಗಗಳನ್ನು ಹೊರತುಪಡಿಸಿ ಪಟ್ಟಣದಲ್ಲೂ ಶುಕ್ರವಾರ ಸಂಜೆಯವರೆಗೆ ಮಳೆಯ ಬಿರುಸು ಕಡಿಮೆಯಾಗಿದ್ದು ತುಂಗಾನದಿಯಲ್ಲಿ ಮೂರು ಅಡಿಗಳಷ್ಟು ನೀರಿನ ಇಳಿಮುಖವಾಗಿದೆ. ಗುರುವಾರ ಸುರಿದ ಮಳೆಯ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ವಿದ್ಯಾರ್ಥಿಗಳ ಸುರಕ್ಷತೆಗೆ ಅನುಗುಣವಾಗಿ ರಜೆ ನಿರ್ಣಯ ಕೈಗೊಳ್ಳುವಂತೆ ಶಾಲಾಭಿವೃದ್ಧಿ ಸಮಿತಿಯವರಿಗೆ ಶಿಕ್ಷಣ ಇಲಾಖೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಕೆಲವು ಶಾಲೆಗಳಿಗೆ ಶುಕ್ರವಾರ ರಜೆ ನೀಡಲಾಗಿತ್ತು. ಹೆಚ್ಚಿನ ಕಡೆಗಳಲ್ಲಿ ಶನಿವಾರ ಕೂಡ ರಜೆ ನೀಡಿರುವುದಾಗಿ ತಿಳಿದು ಬಂದಿದೆ. ಆಗುಂಬೆ ಹೋಬಳಿಯಲ್ಲಿ ಗುರುವಾರಕ್ಕಿಂತ ಕಡಿಮೆ ಮಳೆಯಾಗಿದ್ದ ಕಾರಣ ಗುಡ್ಡೇಕೇರಿಯ ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆೆ, ಹೊನ್ನೇತಾಳು, ಮೇಗರವಳ್ಳಿಯ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಸೇರಿದಂತೆ ಕೆಲವೊಂದು ಶಾಲೆಗಳು ಎಂದಿನಂತೆ ನಡೆದಿವೆ. ಅಗ್ರಹಾರ ಹೋಬಳಿಯ ಕೋಣಂದೂರಿನಲ್ಲಿ ನವಜ್ಯೋತಿ ಶಾಲೆಯನ್ನು ಹೊರತು ಪಡಿಸಿ ಉಳಿದ ಶಾಲೆಗಳು ನಡೆದಿರುವುದಾಗಿ ತಿಳಿದು ಬಂದಿದೆ.