ವಸತಿ ಸಮುಚ್ಚಯದಲ್ಲಿ ಮಳೆ ಕೊಯ್ಲು ಮಾದರಿ

dc
Published on

ಉಡುಪಿ: ಜಿಲ್ಲೆಗೆ ಬಹಳ ಅಗತ್ಯವಿರುವ ಮಳೆ ನೀರು ಕೊಯ್ಲು ಕಾರ್ಯಕ್ರಮ ಉಡುಪಿಯ ವಸತಿ ಸಮುಚ್ಚಯದಲ್ಲಿ ಮಾಡಿರುವುದು ಮಾದರಿ ಕೆಲಸ. ಈ ಕೆಲಸದಿಂದ ಜಿಲ್ಲೆಯ ಇತರ ವಸತಿ ಸಮುಚ್ಚಯಗಳಿಗೆ ಪ್ರೇರಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಉಡುಪಿ ಪೊಲೀಸ್ ಮೈದಾನ ಬಳಿ ಸಾಯಿರಾಧಾ ಎನ್‌ಕ್ಲೇವ್‌ನಲ್ಲಿ ಮಂಗಳವಾರ ಮಳೆ ನೀರು ತಡೆ ಹಿಡಿದು ತೆರೆದ ಬಾವಿ ಹಾಗೂ ಕೊಳವೆ ಬಾವಿಗೆ ವ್ಯವಸ್ಥಿತವಾಗಿ ಶೋಧಿಸಿ ಇಳಿಸಿ ಭೂಗರ್ಭದಲ್ಲಿ ಅಂತರ್ಜಲ ಮಟ್ಟ ಏರಿಸುವ ಉದ್ದೇಶದಿಂದ ನಿರ್ಮಿಸಿದ ಮಳೆ ನೀರು ಕೊಯ್ಲು ಘಟಕ ಉದ್ಘಾಟಿಸಿ ಮಾತನಾಡಿದರು. ಬರದ ನಾಡಿನಲ್ಲಿ ನೀರನ್ನು ಚಿನ್ನದಂತೆ ನೋಡಲಾಗುತ್ತಿದ್ದು, ಹನಿ ನೀರನ್ನೂ ಸೂಕ್ಷ್ಮವಾಗಿ ಬಳಸಿಕೊಳ್ಳಲಾಗುತ್ತಿದೆ. ನೀರಿನ ಮಹತ್ವ ಅರಿತು ಇತ್ತೀಚೆಗೆ ಉಡುಪಿಯಲ್ಲಿ ಹರಿಯುವ ನದಿಗೆ ಕಿಂಡಿ ಅಣೆಕಟ್ಟು ಕಟ್ಟಿ ಶೇಖರಿಸಲಾಗುತ್ತಿದ್ದು, ಮರು ಬಳಕೆ ಸಾಧ್ಯವಾಗುತ್ತಿದೆ. ಮಳೆ ಕೊಯ್ಲಿನಂಥ ಕಾರ್ಯಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕು ಎಂದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಮತ್ತು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ರಾಜ್, ಮಳೆ ನೀರಿನೊಂದಿಗೆ ಅನುಸಂಧಾನ, ಜಲಜಾಗೃತಿ-ಜಲ ಸಂರಕ್ಷಣೆ-ಜಲ ಮರುಪೂರಣ ಲೋಗೊ ಬಿಡುಗಡೆ ಮಾಡಿದರು. ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಜಲಸಂರಕ್ಷಣೆ ಕುರಿತ ಕರಪತ್ರ ಬಿಡುಗಡೆಗೊಳಿಸಿದರು. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರತ್ನಶ್ರೀ ಜೋಸೆಫ್ ಜಿ.ಎಂ ರೆಬೆಲ್ಲೊ ಪ್ರಾಸ್ತಾವಿಕ ಮಾತನಾಡಿದರು. ಸಾಯಿರಾಧಾ ಎನ್‌ಕ್ಲೇವ್ ಉಡುಪಿ ವಸತಿ ಸಮುಚ್ಚಯ ಅಧ್ಯಕ್ಷ ಎನ್.ಕೃಷ್ಣಸ್ವಾಮಿ ಭಟ್, ಕೋಶಾಧಿಕಾರಿ ಸತೀಶ್ ಭಟ್, ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಮತ್ತಿತರರು ಹಾಜರಿದ್ದರು. ಜಗದೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಜೋಸೆಫ್ ಜಿ.ಎಂ.ರೆಬೆಲ್ಲೊ ವಂದಿಸಿದರು.

ಜಿಲ್ಲೆಯಲ್ಲಿ ಪ್ರತಿವರ್ಷ 4 ಸಾವಿರ ಎಂ.ಎಂ ಗಿಂತ ಹೆಚ್ಚು ಮಳೆ ಸುರಿಯುತ್ತಿದೆ. ಆದರೂ ಬೇಸಿಗೆಯಲ್ಲಿ ನೀರಿನ ಅಭಾವ ಕಂಡು ಬರುತ್ತಿದೆ. ನೀರನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತೆರೆದ ಬಾವಿ ಹಾಗೂ ಕೊಳವೆ ಬಾವಿ ಜಲಪೂರಣ ಕಾರ್ಯಕ್ರಮ ಮಾರ್ಗದರ್ಶಕವಾಗಿ ಕೆಲಸ ಮಾಡಲಿದೆ.

ಪ್ರೀತಿ ಗೆಹ್ಲೋಟ್, ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net