ನೀರಿನ ಸಮಸ್ಯೆಗೆ ಮಳೆ ಕೊಯ್ಲೇ ಪರಿಹಾರ

14 ckm 5
ಚಿಕ್ಕಮಗಳೂರಿನಲ್ಲಿ ಮಳೆ ನೀರು ಕೊಯ್ಲು ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ವಿಜಯರಾಜ್, ಸದಾನಂದ ಬ್ಯಾಪ್ಟಿಸ್, ಜಯಂತ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಮಳೆ ನೀರು ಕೊಯ್ಲು ತಂತ್ರಜ್ಞಾನ ಬಳಸಿಕೊಂಡು ಮುಂದಿನ ಪೀಳಿಗೆಗೆ ಒಂದು ಭವಿಷ್ಯ ಕೊಡಬಹುದು. ನೀರಿನ ಸಮಸ್ಯೆಗೆ ನಮ್ಮ ಕೈಯಲ್ಲೇ ಪರಿಹಾರ ಇದೆ. ಈ ತಂತ್ರಜ್ಞಾನ ತುಂಬ ಸರಳವೂ ಇದೆ ಎಂದು ರೇನಿ ರೀಸರ್ಚ್ ಅಂಡ್ ಮ್ಯಾನುಫ್ಯಾಕ್ಚರ್ ಸಂಸ್ಥೆ ನಿರ್ದೇಶಕ ವಿಜಯರಾಜ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ ದೇಶದ ವಿವಿಧ ರಾಜ್ಯಗಳ ಎನ್‌ಜಿಓಗಳು ಮತ್ತು ಮಳೆ ನೀರು ಕೊಯ್ಲು ವಿಷಯದಲ್ಲಿ ಆಸಕ್ತಿ ಹೊಂದಿರುವವರ ಸಮಾವೇಶದಲ್ಲಿ ಮಾತನಾಡಿದ ಅವರು, ಎಲ್ಲೆಡೆ ನೀರಿಗೆ ಹಾಹಾಕಾರ ಇದೆ. ಇದೇ ವೇಳೆ ಸಾಕಷ್ಟು ಮಳೆಯಾಗುತ್ತಿದೆ. ಆದರೆ ಆ ನೀರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ನಾವು ಮಾಡುತ್ತಿಲ್ಲ. ಬೆಂಗಳೂರಿನಲ್ಲಿ ಒಂದು ಚಿಕ್ಕ ಮನೆಯಲ್ಲಿ ವರ್ಷಕ್ಕೆ 1.20 ಲಕ್ಷ ಲೀಟರ್ ಶುದ್ಧ ನೀರು ಪೋಲಾಗುತ್ತಿದೆ. ಅದನ್ನು ಹೊರಕ್ಕೆ ಬಿಟ್ಟು ನೀರಿಗಾಗಿ ಹುಡುಕಾಡುವ ಸ್ಥಿತಿ ನಾವೇ ತಂದುಕೊಂಡಿದ್ದೇವೆ ಎಂದರು.
ಮಳೆ ನೀರನ್ನು ಸಂಪನ್ಮೂಲ ಎಂದು ಎಂದಿಗೂ ನಾವು ಅಂದುಕೊಂಡಿಲ್ಲದಿರುವುದೇ ಸಮಸ್ಯೆಯಾಗಿರುವುದು. ಒಂದು ಎಕರೆಗೆ ಒಂದು ಇಂಚು ಮಳೆ ನೀರು ಬಿದ್ದರೆ ವರ್ಷಕ್ಕೆ 1 ಲಕ್ಷ ಲೀಟರ್ ನೀರು ಸುಮ್ಮನೆ ಹರಿದು ಹೋಗುತ್ತದೆ. ಅದನ್ನು ನಾವೇ ಹಿಡಿದಿಟ್ಟು ಭೂಮಿಯಲ್ಲಿ ಇಂಗಿಸಿದ್ದರೆ, ಇಂದು ನಮಗೇ ಸಿಗುತ್ತಿತ್ತು. ಅಂತರ್ಜಲದ ಸ್ಥಿತಿ ಚಿಂತಾಜನಕವಾಗಿದೆ. 1700 ಅಡಿ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. 4 ಲಕ್ಷ ರೂ. ರೈತರು ಖರ್ಚು ಮಾಡಬೇಕಿದೆ. ಇದೇ ಕಾರಣಕ್ಕೆ ಸಾಲ ಹೆಚ್ಚಾಗಿ ರೈತ ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ ಎಂದು ತಿಳಿಸಿದರು.
ರೇನಿ ರೀಸರ್ಚ್ ಅಂಡ್ ಮ್ಯಾನೋಫ್ಯಾಕ್ಚರ್ ಸಂಸ್ಥೆ ನಿರ್ದೇಶಕ ಮೈಕಲ್ ಸದಾನಂದ ಬ್ಯಾಪ್ಟಿಸ್ ಮಾತನಾಡಿ, ಪ್ರತಿಯೊಬ್ಬರು ಅಂತರ್ಜಲವನ್ನು ಹೆಚ್ಚಿಸಲು ಪ್ರಯತ್ನ ಪಡಬೇಕು. ನೀರನ್ನು ಸಂರಕ್ಷಣೆ ಮಾಡಿ ಮಿಥವಾಗಿ ಬಳಸಬೇಕು. ಈ ಎಲ್ಲ ಕಾರಣದಿಂದ ಎನ್‌ಜಿಓಗಳು ಮತ್ತು ಮಳೆನೀರಿನ ಬಗ್ಗೆ ಕಾಳಜಿ ಇರುವವರಿಗಾಗಿ ಒಂದು ಸಮ್ಮೇಳನ ಹಮ್ಮಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಇಡೀ ಭಾರತದಲ್ಲಿ ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ದೇಶದ ಜಮ್ಮು ಮತ್ತು ಕಾಶ್ಮೀರ, ರಾಂಚಿ, ರಾಜಸ್ಥಾನ, ಮುಂಬೈ, ದೆಹಲಿ, ಚೆನೈ, ಆಂದ್ರದಿಂದಲೂ ಆಸಕ್ತರು ಇಲ್ಲಿಗೆ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.
ಮಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಜಯಂತ್, ಗುರಂಗಾಂವ್‌ನ ಸುನೀಲ್ ಪಚಾರ್, ಮುಂಬೈನ ಸಂದೀಪ್ ಅಧ್ಯಾಪಕ್, ಹೈದರಾಬಾದ್‌ನ ವಾಸುದೇವ್, ಸಂಸ್ಥೆಯ ನಿರ್ದೇಶಕರಾದ ಮನೋಜ್ ಸಾಂವೆಲ್ ಬ್ಯಾಪ್ಟಿಸ್ಟ್, ವರುಣ್ ಬ್ಯಾಪ್ಟಿಸ್ಟ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net