

ಮೈಸೂರು: ನಗರದ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ 250 ಕೋಟಿ ರೂ. ಅನುದಾನ ನೀಡಿದ್ದು, ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾರ್ಯಾದೇಶವನ್ನು ಸಹ ನೀಡಲಾಗಿದೆ. ಮಳೆ ಬಿಡುವು ನೀಡಿದ ತಕ್ಷಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ನಗರ ಪಾಲಿಕೆ ಆಯುಕ್ತ ಜಿ. ಲಕ್ಷ್ಮೀಕಾಂತ್ ರೆಡ್ಡಿ ಹೇಳಿದರು.
ನಾಡಿನ ನಂ.1 ಕನ್ನಡ ದೈನಿಕ ‘ವಿಜಯವಾಣಿ’ ಶುಕ್ರವಾರ ಹಮ್ಮಿಕೊಂಡ ಫೋನ್ ಕಾರ್ಯಕ್ರಮದಲ್ಲಿ ಸಾಕಷ್ಟು ಜನರು ರಸ್ತೆ ಸಮಸ್ಯೆ ಕುರಿತು ಪಾಲಿಕೆ ಆಯುಕ್ತರ ಗಮನ ಸೆಳೆದರು. ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲು 3 ತಿಂಗಳ ಹಿಂದೆಯೇ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳ ಲಾಗಿತ್ತು. ಆದರೆ, ಮಳೆ ಬಿಡುವು ನೀಡದ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಮಳೆಯ ನಡುವೆಯೇ ಕಾಮಗಾರಿ ಕೈಗೊಂಡರೆ ಮತ್ತೆ ಗುಂಡಿ ಕಾಣಿಸಿಕೊಂಡು ರಸ್ತೆ ಯತಾಸ್ಥಿತಿಗೆ ತಲುಪುತ್ತದೆ. ಹಾಗಾಗಿ ಮಳೆ ಬಿಡುವು ನೀಡಿದ ನಂತರ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಈಗಾಗಲೇ ನಗರದ ಕೆಲವು ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಆದರೆ, ನಗರದ ಎಲ್ಲ ರಸ್ತೆಗಳ ಅಭಿವೃ ದ್ಧಿಗೆ ಮಳೆ ಬಿಡುವು ನೀಡಬೇಕಾಗಿದೆ. ನಗರದ ಎಲ್ಲ ರಸ್ತೆಗಳನ್ನು ಒಂದೂವರೆಯಿಂದ ಎರಡು ತಿಂಗಳ ಒಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ದಟ್ಟಗಳ್ಳಿ ಭಾಗದ ಜನರಿಂದ ಪಾಲಿಕೆ ಕಂದಾಯ ಪಾವತಿಸಿಕೊಳ್ಳುತ್ತಿಲ್ಲ ಎಂದು ನಿಂಗಯ್ಯ ಎಂಬವರು ದೂರಿದರು. ಈ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು. ಕೆಸರೆ ಮುಖ್ಯ ರಸ್ತೆಯನ್ನು ಇತ್ತೀಚೆಗೆ ಅಭಿವೃದ್ಧಿ ಪಡಿಸಲಾಗಿದೆ. ಆದರೆ ಆ ರಸ್ತೆಯನ್ನು ಕೆಲವರು ಮತ್ತೆ ಅಗೆದಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಇದರ ಜತೆಗೆ ಕೆಸರೆ ಸುತ್ತಮುತ್ತಲಿನ ರಸ್ತೆಗಳು ಹದಗೆಟ್ಟಿದ್ದು , ಕೂಡಲೇ ಅಭಿವೃದ್ಧಿಗೆ ಕ್ರಮ ವಹಿಸಬೇಕು ಎಂದು ಕೆಸರೆಯ ಮೋಹನ್ ಆಗ್ರಹಿಸಿದರು. ಈ ಕುರಿತು ಸೂಕ್ತ ಕ್ರಮ ವಹಿಸುವ ಭರವಸೆಯನ್ನು ಆಯುಕ್ತರು ನೀಡಿದರು.
ನಾಯ್ಡು ನಗರದ ಕೃಷ್ಣಸಿಂಗ್ ಕರೆ ಮಾಡಿ, ನಾಯ್ಡು ನಗರದ ಮುಖ್ಯ ರಸ್ತೆ ಗುಂಡಿ ಬಿದ್ದಿದ್ದು, ಕೂಡಲೇ ದುರಸ್ತಿ ಪಡಿಸಲು ಕ್ರಮ ವಹಿಸಿ. ನಾಯ್ಡುನಗರದ ನಾಗಲಿಂಗೇಶ್ವರ ಉದ್ಯಾನ ಬಳಿಯಲ್ಲಿ ತ್ಯಾಜ್ಯ ಸುರಿಯಲಾಗುತ್ತಿದ್ದು, ಜನರು ಓಡಾಡಲು ಆಗದಂತಹ ವಾತಾವ ರಣ ನಿರ್ಮಾಣವಾಗಿದೆ. ನಾಯಿಗಳ ಹಾವಳಿ ಸಹ ಹೆಚ್ಚಾಗಿ ಕಂಡು ಬರುತ್ತಿದ್ದು, ಈ ಕುರಿತು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು. ಈ ಕುರಿತು ಪ್ರತಿಕ್ರಿಯಿಸಿದ ಆಯುಕ್ತರು, ರಸ್ತೆ ಮತ್ತು ತ್ಯಾಜ್ಯದ ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸಲು ಕ್ರಮ ವಹಿಸಲಾಗುವುದು. ನಾಯಿಗಳ ಹಾವಳಿ ನಿಯಂತ್ರಣಕ್ಕೆ ಪಾಲಿಕೆ ಕ್ರಮ ವಹಿಸುತ್ತಿದೆ. ಇದಕೋಸ್ಕರ ಸಂತಾನಹರಣ ಶಸ್ತ್ರ ಚಿಕಿತ್ಸೆ ಕೈಗೊಳ್ಳಲಾಗುತ್ತಿದ್ದು, ನಾಯಿಗಳ ಸಂಖ್ಯೆ 44,000 ದಿಂದ 8,000 ಕ್ಕೆ ಇಳಿಕೆಯಾಗಿದೆ ಎಂದರು.
ಶ್ರೀರಾಂಪುರದ ಟೋಲ್‌ಗೇಟ್ ಬಳಿಯ ರಸ್ತೆ ಹದಗೆಟ್ಟಿದ್ದು, ದುರಸ್ತಿಗೆ ಸುಮಾ ಶ್ರೀಧರ್ ಮನವಿ ಮಾಡಿದರು. ಸ್ಥಳಕ್ಕೆ ಇಂಜಿನಿಯರ್‌ಅನ್ನು ಕಳುಹಿಸಿ ರಸ್ತೆ ಅಭಿವೃದ್ಧಿ ಕ್ರಮ ವಹಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.
ಶ್ರೀರಾಂಪುರ ಸಮೀಪದ ನಿತ್ಯಾನಂದ ಬಡಾವಣೆ 2017ರಲ್ಲಿ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಿದ್ದು, ಬಡಾವಣೆಯಲ್ಲಿ ಬೀದಿ ದೀಪ ಹಾಗೂ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಸೀತಾರಾಂ ಸಮಸ್ಯೆ ಕುರಿತು ಗಮನ ಸೆಳೆದರು. ಈ ಕುರಿತು ಪ್ರತಿಕ್ರಿಯಿಸಿದ ಆಯುಕ್ತರು, ಕಬಿನಿ ಎರಡನೇ ಹಂತದ ಯೋಜನೆಯಡಿ ನಗರಕ್ಕೆ ಹೆಚ್ಚುವರಿ ನೀರು ದೊರೆಯುತ್ತಿದ್ದು, ಇನ್ನು ಮೂರು ತಿಂಗಳ ಒಳಗೆ ಶ್ರೀರಾಂಪುರ ಭಾಗದ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದರು.
ವಸತಿ ಯೋಜನೆಗೆ ಜಾಗದ ಕೊರತೆ
ನಗರದಲ್ಲಿ ವಸತಿ ಯೋಜನೆ ಅನುಷ್ಠಾನಗೊಳಿಸಲು ಜಾಗದ ಕೊರತೆ ಎದುರಾಗುತ್ತಿದೆ. 10-15 ವರ್ಷಗಳ ಹಿಂದೆ ಜನರು ವಸತಿಗೋಸ್ಕರ ಹಣ ಪಾವತಿ ಮಾಡಿದ್ದಾರೆ. ಆದರೆ, ನಗರದ ಸುತ್ತಮುತ್ತ ವಸತಿ ಯೋಜನೆ ಅನುಷ್ಠಾನಗೊಳಿಸುವಷ್ಟು ಜಾಗ ದೊರೆಯುತ್ತಿಲ್ಲ. ಜಾಗ ದೊರೆತ ಕೂಡಲೇ ವಸತಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ವಸತಿ ನಮಗೆ ಬೇಡ ನಾವು ಕಟ್ಟಿರುವ ಹಣ ನೀಡಿ ಎಂದು ಜನರು ಕೇಳಿದರೆ ಹಣ ಹಿಂತಿರುಗಿಸಲು ಪಾಲಿಕೆ ಸಿದ್ಧವಿದೆ ಎಂದು ಎನ್.ಆರ್. ಮೊಹಲ್ಲಾದ ಹರಿಪ್ರಸಾದ್ ಪ್ರಶ್ನೆಗೆ ಆಯುಕ್ತರು ಉತ್ತರಿಸಿದರು.
ಚಾಮರಾಜ ವಿಧಾನಸಭಾ ಕ್ಷೇತ್ರದ ಬಡವರ್ಗದವರಿಗೆ ದಟ್ಟಗಳ್ಳಿ ಬಳಿಯ ಅಯ್ಯಜ್ಜಯ್ಯನಹುಂಡಿಯಲ್ಲಿ ವಸತಿ ಯೋಜನೆ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿತ್ತು. ಆದರೆ ಅದು ಕೆರೆಗೆ ಸೇರಿದ ಜಾಗವಾದ್ದರಿಂದ ಅಲ್ಲಿ ವಸತಿ ಯೋಜನೆ ಅನುಷ್ಠಾನಗೊಳಿ ಸುವುದನ್ನು ಕೈಬಿಟ್ಟು ಬೇರೆ ಕಡೆ ವಸತಿ ಯೋಜನೆ ಅನುಷ್ಠಾನಕ್ಕೆ ಜಾಗ ಹುಡುಕಾಟ ನಡೆಸಲಾಗುತ್ತಿದೆ. ಪೌರ ಕಾರ್ಮಿಕರಿಗೆ ಮಳಲವಾಡಿಯಲ್ಲಿ ಜಿ ಪ್ಲಸ್ 3 ಮನೆ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.
ನೀರಿನ ಮೀಟರ್ ಕಡ್ಡಾಯ
ನೀರಿನ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದ್ದು, ಮೀಟರ್ ಅಳವಡಿಕೆ ಮಾಡಿಕೊಳ್ಳದವರ ಮನೆಗಳ ನೀರಿನ ಸಂಪರ್ಕ ಕಡಿತಗೊಳಿಸಲಾಗುತ್ತಿದೆ ಎಂದು ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಹೇಳಿದರು.
ನಗರದಲ್ಲಿ 25 ಸಾವಿರ ಮನೆಗಳಿಗೆ ನೀರಿನ ಮೀಟರ್ ಇರಲಿಲ್ಲ. ಈ ಪೈಕಿ ಎಲ್ಲರಿಗೂ ಸೂಚನೆ ನೀಡಿದ ನಂತರ ಇದೀಗ 8 ಸಾವಿರ ಮನೆಗಳಿಗೆ ಹೊಸದಾಗಿ ಮೀಟರ್ ಅಳವಡಿಕೆಯಾಗಿದೆ. ನಿಗದಿತ ಕಾಲಮಿತಿಯೊಳಗೆ ಮೀಟರ್ ಅಳವಡಿಸಿಕೊಳ್ಳದೆ ಇದ್ದರೆ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.
ನಗರದಲ್ಲಿ 50 ಸಾವಿರ ಮನೆಗಳ ಮೀಟರ್ ಕೆಟ್ಟು ಹೋಗಿತ್ತು. ಅಂಥ ಮನೆಗಳಿಗೆ ಹೊಸ ಮೀಟರ್ ಅಳವಡಿಸಿ ಕಾರ್ಯ ನಡೆಯುತ್ತಿದ್ದು, 10 ಸಾವಿರ ಮನೆಗಳಿಗೆ ಹೊಸದಾಗಿ ಮೀಟರ್ ಅಳಡಿಸಲಾಗಿದೆ. ಅಕ್ಟೋಬರ್ ಅಂತ್ಯಕ್ಕೆ ಈ ಸಂಖ್ಯೆಯನ್ನು 20 ಸಾವಿರಕ್ಕೆ ಇಳಿಕೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ಗೂಗಲ್ ಪೇ, ಫೋನ್‌ಪೇ ಮೂಲಕ ಬಿಲ್ ಪಾವತಿಸಿ
ನೀರಿನ ಬಿಲ್ ಪಾವತಿಗೆ ಈ ಹಿಂದೆ ಗೂಗಲ್ ಪೇ ಹಾಗೂ ಫೋನ್ ಪೇ ಮೂಲಕ ಅವಕಾಶ ನೀಡಲಾಗಿತ್ತು. ಆದರೆ, ಇದಕೋಸ್ಕರ ಪಾಲಿಕೆಯಲ್ಲಿ ಪ್ರತ್ಯೇಕ ಸಾಫ್ಟ್‌ವೇರ್ ಇಲ್ಲದ ಹಿನ್ನೆಲೆಯಲ್ಲಿ ಪಾಲಿಕೆಗೆ ಸಾಕಷ್ಟು ಆರ್ಥಿಕ ಹೊರೆಯಾಗುತಿತ್ತು. ಇದೀಗ ಹೊಸದಾಗಿ ಪಾಲಿಕೆಯಿಂದ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಲಾಗಿದ್ದು, ಸದ್ಯದಲ್ಲಿಯೇ ಗೂಗಲ್ ಪೇ, ಫೋನ್‌ಪೇ ಮೂಲಕ ಬಿಲ್ ಪಾವತಿಸುವ ವ್ಯವಸ್ಥೆ ಮತ್ತೆ ಜಾರಿಗೆ ಬರಲಿದೆ. ಅಲ್ಲದೆ ನಗರ ಪಾಲಿಕೆಯ ವೆಬ್‌ಸೈಟ್ ಮೂಲಕ ನೀರಿನ ಬಿಲ್ ಪಾವತಿಗೆ ಅವಕಾಶ ನೀಡಲಾಗಿದೆ ಎಂದರು. ಕಳೆದ ಬಾರಿ ಒಟ್ಟು 48 ಕೋಟಿ ರೂ. ನೀರಿನ ಕಂದಾಯ ವಸೂಲಾತಿಯಾಗಿತ್ತು. ಈ ಬಾರಿ 65 ಕೋಟಿ ರೂ. ಸಂಗ್ರಹವಾಗಿದ್ದು, ಮುಂದಿನ ಆರ್ಥಿಕ ಸಾಲಿಗೆ 70 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ಬೋಗಾದಿ ಮಳೆ ನೀರಿನ ಸಮಸ್ಯೆಗೆ ಮುಕ್ತಿ
ಬೋಗಾದಿ ವರ್ತುಲ ರಸ್ತೆಯಲ್ಲಿ ಮಳೆ ನೀರು ನಿಂತು ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಬೋಗಾದಿ ಭಾಗದಲ್ಲಿ ಹೊಸ ಮಳೆ ನೀರು ಚರಂಡಿಯನ್ನು ನಿರ್ಮಾಣ ಮಾಡಲಾಗಿದ್ದು, ಕೆಲವು ಕಡೆ ಒತ್ತುವರಿ ತೆರವುಗೊಳಿಸಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೋಗಾದಿ ಭಾಗದಲ್ಲಿ ಮಳೆ ನೀರು ನಿಂತು ಸಮಸ್ಯೆ ಎದುರಾಗುವ ಚಿತ್ರಣ ಕಂಡು ಬರುವುದಿಲ್ಲ ಎಂದು ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಹೇಳಿದರು.
3 ವಾರ್ಡ್‌ಗಳಲ್ಲಿ ಗ್ಯಾಸ್‌ಪೈಪ್‌ಲೈನ್ ಕಾಮಗಾರಿ
ನಗರ ಪಾಲಿಕೆಯ 3, 20 ಮತ್ತು 47ನೇ ವಾರ್ಡ್‌ನಲ್ಲಿ ಮಾತ್ರ ಗ್ಯಾಸ್‌ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ. ಅಲ್ಲಿ ಕಾಮಗಾರಿ ಪೂರ್ಣಗೊಂಡ ನಂತರ ಮುಂದಿನ ವಾರ್ಡ್‌ಗಳಲ್ಲಿ ಕಾಮಗಾರಿಗೆ ಅವಕಾಶ ನೀಡಲಾಗುವುದು ಎಂದು ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಹೇಳಿದರು.
ಗ್ಯಾಸ್‌ಪೈಪ್‌ಲೈನ್ ಅಳವಡಿಕೆ ಮಾಡುತ್ತಿರುವ ವಾರ್ಡ್‌ಗಳಲ್ಲಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಈಗಾಗಲೇ ಅಭಿವೃದ್ಧಿಗೊಂಡಿರುವ ರಸ್ತೆಯನ್ನು ಪೈಪ್‌ಲೈನ್ ಅಳವಡಿಕೆಗೆ ಅಗೆದರೆ ಗ್ಯಾಸ್‌ಪೈಪ್ ಲೈನ್ ಅಳವಡಿಕೆಯ ಗುತ್ತಿಗೆ ಪಡೆದ ಸಂಸ್ಥೆಯೇ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಎಂದರು.
ರಿಂಗ್‌ರೋಡ್‌ನಲ್ಲಿ ಬೆಳಗಲಿದೆ ಬೀದಿದೀಪ
ನಗರದ ವರ್ತುಲ ರಸ್ತೆಯ ಬೀದಿ ದೀಪದ ಸಮಸ್ಯೆ ಒಂದು ತಿಂಗಳ ಒಳಗೆ ಬಗೆಹರಿಯಲಿದೆ ಎಂದು ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಭರವಸೆ ನೀಡಿದರು. ವರ್ತುಲ ರಸ್ತೆಯ ಬೀದಿ ದೀಪವನ್ನು ನಗರ ಪಾಲಿಕೆ ನಿರ್ವಹಣೆ ಮಾಡಬೇಕೋ ಅಥವಾ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿರ್ವಹಣೆ ಮಾಡಬೇಕೋ ಎಂಬ ಗೊಂದಲ ಇತ್ತು. ಇದೀಗ ಆ ಗೊಂದಲಕ್ಕೆ ತೆರೆ ಎಳೆಯಲಾಗಿದ್ದು, ಮುಡಾದಿಂದ ಬೀದಿ ದೀಪಗಳ ಅಳವಡಿಕೆ ಹಾಗೂ ಕೇಬಲ್ ಅಳವಡಿಕೆಗೆ 12 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ನಡೆಯುತ್ತಿದೆ. ಇನ್ನು ಮುಂದೆ ಪಾಲಿಕೆಯಿಂದ ಬೀದಿ ದೀಪಗಳನ್ನು ನಿರ್ವಹಣೆ ಮಾಡಿಕೊಂಡು ಹೋಗಲಾಗುವುದು. ಹಾಗಾಗಿ ಮುಂದಿನ ದಿನಗಳಲ್ಲಿ ವರ್ತುಲ ರಸ್ತೆಯಲ್ಲಿ ಬೀದಿ ದೀಪಗಳ ಸಮಸ್ಯೆ ಕಂಡು ಬರುವುದಿಲ್ಲ ಎಂದು ಆಯುಕ್ತರು ಭರವಸೆ ನೀಡಿದರು.
ಪ್ರಸ್ತಾವನೆ ಹಂತದಲ್ಲಿದೆ ‘ಗ್ರೇಟರ್ ಮೈಸೂರು’
ನಗರದ ಸುತ್ತಮುತ್ತಲಿನ ಪ್ರದೇಶಗಳನ್ನು ಸೇರಿಸಿ ಮೈಸೂರು ಮಹಾ ನಗರ ಪಾಲಿಕೆಯನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆಯಾಗಿ (ಗ್ರೇಟರ್ ಮೈಸೂರು) ಮೇಲ್ದರ್ಜೆಗೇರಿಸುವ ವಿಷಯ ಇನ್ನೂ ಪ್ರಸ್ತಾವನೆ ಹಂತದಲ್ಲಿದ್ದು, ಈ ಕುರಿತು ಸರ್ಕಾರ ಇನ್ನೂ ಯಾವ ತೀರ್ಮಾನ ಕೈಗೊಂಡಿಲ್ಲ ಎಂದು ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಹೇಳಿದರು.
ಗ್ರೇಟರ್ ಮೈಸೂರು ರಚನೆಯಾದರೆ ಹೂಟಗಳ್ಳಿ ನಗರಸಭೆ, ಬೋಗಾದಿ, ಕಡಕೊಳ, ಶ್ರೀರಾಂಪುರ ಮತ್ತು ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ, ಹಾಲನಹಳ್ಳಿ, ಚಾಮುಂಡಿಬೆಟ್ಟ, ಇಲವಾಲ ಮತ್ತು ಸಿದ್ದಲಿಂಗಪುರ ಗ್ರಾಮ ಪಂಚಾಯಿತಿಗಳು ಪಾಲಿಕೆ ವ್ಯಾಪ್ತಿಗೆ ಒಳಪಡಿಸಲಿದೆ ಎಂದರು.
ಕರೆ ಮಾಡಿದವರು: ಎನ್.ಆರ್. ಮೊಹಲ್ಲದ ಹರಿಪ್ರಸಾದ್, ದಟ್ಟಗಳ್ಳಿಯ ನಿಂಗಯ್ಯ, ನಾಯ್ಡುನಗರದ ಪ್ರಕಾಶ್, ನಂಜುಮಳಿಗೆ ರಘು, ಲಕ್ಷ್ಮೀಕಾಂತನಗರದ ಲತಾ, ಕೆಸರೆಯ ಮೋಹನ್, ಶ್ರೀರಾಂಪುರದ ಸುಮ, ಕುವೆಂಪುನಗರದ ಗಿರೀಶ್, ನಾಯ್ಡು ನಗರದ ಕೃಷ್ಣಸಿಂಗ್, ಜೆಪಿ ನಗರದ ಪ್ರಕಾಶ್, ಮಹದೇವಪುರದ ಕನ್ಯಾಕುಮಾರಿ, ಕೆಸರೆಯ ರಾಕೇಶ್, ಡಿ. ಸುಬ್ಬಯ್ಯ ರಸ್ತೆಯ ಗಿರಿಧರ್, ಶ್ರೀರಾಂಪುರದ ಸುಮ ಶ್ರೀಧರ್, ರಾಘವೇಂದ್ರ ಬಡಾವಣೆಯ ಮಂಜು, ಶ್ರೀರಾಂಪುರದ ಸೀತಾರಾಂ
ನಿರ್ವಹಣೆ: ಎಂ.ಆರ್. ಸತ್ಯನಾರಾಯಣ, ಸದೇಶ್ ಕಾರ್ಮಾಡ್. ಚಿತ್ರಗಳು : ಕೆ.ಎಚ್. ಚಂದ್ರು