ಕಾಫಿ ಹಣ್ಣಿಗೆ ಗಂಟುಬಿದ್ದ ಮಂಗಗಳು

Coffee
Published on

ಮೂಡಿಗೆರೆ: ಮುಂಗಾರಲ್ಲಿ ಅತಿವೃಷ್ಟಿ, ಇತ್ತೀಚೆಗೆ ಅಕಾಲಿಕ ಮಳೆಯಿಂದ ಹಾನಿಯಾಗಿ ಉಳಿದ ಕಾಫಿ ಫಸಲಿಗೆ ಮಂಗಗಳು ಮುಗಿಬೀಳುತ್ತಿವೆ. ಕೊಯ್ಲಿಗೆ ಬಂದಿರುವ ಕಾಫಿ ಹಣ್ಣುಗಳನ್ನು ಮಂಗಗಳು ತಿನ್ನುತ್ತಿರುವುದು ಬೆಳೆಗಾರರನ್ನು ಚಿಂತೆಗೀಡುಮಾಡಿದೆ.

ಈ ಹಿಂದೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ತೋಟಕ್ಕೆ ಮಾತ್ರ ಮಂಗಗಳು ಲಗ್ಗೆ ಇಡುತ್ತಿದ್ದವು. ಈಗ ಕೆಲ ತೋಟದ ಮಾಲೀಕರು ತೋಟದಲ್ಲಿ ಬೀಡುಬಿಟ್ಟಿರುವ ಮಂಗಗಳನ್ನು ಹಿಡಿದು ಬೇರೆಡೆ ಸಾಗಿಸುತ್ತಿದ್ದಾರೆ. ಹಾಗಾಗಿ ಮಂಗಗಳ ಸಂತತಿಯೂ ಹೆಚ್ಚಾಗಿದೆ. ಗ್ರಾಮೀಣ ಭಾಗ ಮಾತ್ರವಲ್ಲದೆ ಪಟ್ಟಣಗಳಲ್ಲೂ ಮಂಗಗಳ ಹಾವಳಿ ಮಿತಿ ಮೀರಿದೆ. ತೋಟದಲ್ಲಿ ಕಾಫಿ ಹಣ್ಣಾದಾಗ ಮಂಗಗಳಿಗೆ ಸುಗ್ಗಿ. ಈಗ ಕಾಫಿ ಹಣ್ಣಾಗಿದ್ದು ಮಂಗಗಳುಅವು ತೋಟವನ್ನು ಬಿಟ್ಟು ಕದಲುತ್ತಿಲ್ಲ. ಕಾರ್ವಿುಕರ ಕೊರತೆಯಿಂದ ಕಂಗಾಲಾಗಿರುವ ಬೆಳೆಗಾರ ಇದೀಗ ಮಂಗಗಳ ಹಾವಳಿಯಿಂದ ಇನ್ನಷ್ಟು ಸಂಕಟಕ್ಕೆ ಸಿಲುಕಿದ್ದಾನೆ.

ಮಂಗಗಳ ಹಾವಳಿ ಹೆಚ್ಚಾಗಿರುವ ತೋಟಗಳಲ್ಲಿ ಹುಲಿ ಮಂಗವನ್ನು ಕೊಂದು ತಿನ್ನುವ ಚಿತ್ರವುಳ್ಳ ಬ್ಯಾನರ್​ಗಳನ್ನು ಬೆಳೆಗಾರರು ಮರಕ್ಕೆ ಕಟ್ಟಿದ್ದರು. ಇದರಿಂದ ಮಂಗಗಳು ಭಯದಿಂದ ಪಲಾಯನ ಮಾಡುತ್ತವೆ ಎಂದು ನಂಬಲಾಗಿತ್ತು. ಆರಂಭದಲ್ಲಿ ಚಿತ್ರವಿರುವ ಬ್ಯಾನರ್ ನೋಡಿ ಹೆದರಿದ ಮಂಗಗಳು ಈಗ ಹುಲಿ ಚಿತ್ರದ ಬ್ಯಾನರ್ ನೋಡಿ ಅಭ್ಯಾಸವಾಗಿದೆ. ಬ್ಯಾನರ್​ನಿಂದ ತೊಂದರೆಯಿಲ್ಲ ಎಂದು ಅರಿತ ಮಂಗಗಳು ತೋಟದಲ್ಲೇ ಬೀಡುಬಿಟ್ಟು ಕೊಯ್ಲಿಗೆ ಬಂದಿರುವ ಹಣ್ಣುಗಳನ್ನು ತಿನ್ನುತ್ತಿವೆ.

ಕಾಫಿ ತೋಟದಲ್ಲಿರುವ ಹಲಸು, ಮಾವು, ಕಿತ್ತಳೆ, ಬಾಳೆ, ಕಾಫಿ ಹಣ್ಣು ಯಾವೊಂದು ಹಣ್ಣುನ್ನೂ ಮಂಗಗಳು ಬಿಡುತ್ತಿಲ್ಲ. ಕಾಫಿ ಕೊಯ್ಲಿಗೆ ಬಂದಾಗ ಮಂಗಗಳು ತಿಂದರೆ ನಾವು ವರ್ಷಪೂರ್ತಿ ಸಂಕಟ ಎದುರಿಸಬೇಕಾಗುತ್ತದೆ. ಅವುಗಳ ನಿಯಂತ್ರಣಕ್ಕೆ ವೈಜ್ಞಾನಿಕವಾಗಿ ಯಾವುದೇ ಅಸ್ತ್ರವಿಲ್ಲದ್ದರಿಂದ ತೊಂದರೆ ಹೇಳತೀರದಾಗಿದೆ ಎನ್ನುತ್ತಾರೆ ಕೊಮಾರ್ಕ್ ರಾಜ್ಯಾಧ್ಯಕ್ಷ ಅರೇಕುಡಿಗೆ ಶಿವಣ್ಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net