

ಸಕಲೇಶಪುರ : ತಾಲೂಕಿನಲ್ಲಿ ವರುಣನಬ್ಬರ ಸ್ವಲ್ಪ ತಹಬದಿಗೆ ಬಂದಿದೆ. ಭಾನುವಾರ ಮಧ್ಯರಾತ್ರಿಯಿಂದ ಸುರಿದ ಬಿರುಸಿನ ಮಳೆ ಮಂಗಳವಾರ ಮಧ್ಯರಾತ್ರಿವರಗೂ ಮುಂದುವರೆದಿತ್ತು. ಈ 24 ಗಂಟೆಯಲ್ಲಿ ತಾಲೂಕಿನಲ್ಲಿ 200 ಮೀ.ಮೀಟರ್ ನಿಂದ 350 ಮೀಟರ್ ಮಳೆಯಾಗಿದೆ.
ಆದರೆ, ಬುಧವಾರ ಮುಂಜಾನೆಯಿಂದ ಬಿಡುವು ನೀಡಿದ್ದ ಮಳೆ, ಕೆಲಕಾಲ ಬಿಸಿಲ ದರ್ಶನಕ್ಕೂ ಅವಕಾಶ ನೀಡಿತ್ತು. ಪರಿಣಾಮ ನೆರೆ ಸೃಷ್ಟಿಯಾಗಿದ್ದ ಪಟ್ಟಣದ ಅಜಾದ್ ರಸ್ತೆಯಲ್ಲಿ ನೆರೆ ಇಳಿದಿದಿದ್ದರೆ, ಹೊಳೆಮಲ್ಲೇಶ್ವರಸ್ವಾಮಿ ಜಲದಿಗ್ಬಂದನದಿಂದ ಬಿಡುಗಡೆಯಾಗಿದೆ. ಇದಲ್ಲದೆ ಹಳ್ಳಕೊಳ್ಳಗಳು ಉಕ್ಕಿಹರಿದು ಸಂಪರ್ಕ ಕಳೆದುಕೊಂಡಿದ್ದ ಬಹುತೇಕ ಗ್ರಾಮಗಳ ಸಂಚಾರಕ್ಕೆ ಮಳೆ ಅವಕಾಶನೀಡಿದೆ.
ರೈಲ್ವೆ ಹಳಿ ದುರಸ್ತಿ ಬಿರುಸು: ಮಳೆ ಬಿಡುವು ನೀಡಿರುವ ಪರಿಣಾಮ ತಾಲೂಕಿನ ಕಡಗರಹಳ್ಳಿ ಗ್ರಾಮದ ರೈಲ್ವೆಹಳಿ ಸಮೀಪ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಪಾಳಿಯ ಆಧಾರದ ಮೇಲೆ 250 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ದಿನದ 24 ಗಂಟೆಯಲ್ಲಿ ಮೂರು ಪಾಳಿಯಲ್ಲಿ ಕೆಲಸ ನಡೆಯುತ್ತಿದೆ. ರಾಜ್ಯದ ವಿವಿಧೆಡೆಯಿಂದ 750 ಕಾರ್ಮಿಕರು ರೈಲ್ವೆ ಹಳಿ ದುರಸ್ತಿ ನಡೆಸುತ್ತಿದ್ದಾರೆ. ಕನಿಷ್ಠ ಇನ್ನೂ 10 ದಿನ ಕಾಮಗಾರಿ ನಡೆಯಲಿದೆ.
ಎಲ್ಲೆಲ್ಲೂ ಜಲ: ತಾಲೂಕಿನಲ್ಲಿ ನಿರಂತರವಾಗಿ ಕಳೆದ ಮೂರು ತಿಂಗಳಿನಿಂದ ಮಳೆ ಸುರಿಯುತ್ತಿರುವ ಪರಿಣಾಮ ದಿಣ್ಣೆ ಪ್ರದೇಶದಲ್ಲೂ ಅಂತರ ಜಲ ಉಕ್ಕುತ್ತಿದೆ. ಪರಿಣಾಮ ಎಲ್ಲೆಲ್ಲೂ ಕಾಲುವೆಯಂತೆ ನೀರು ಹರಿಯುತ್ತಿದ್ದು ಭೂಮಿ ಸಂಪೂರ್ಣ ಶೀತಪಿಡಿತಗೊಂಡಿದೆ.