

ಮೈಸೂರು: ಕಾವೇರಿ ಕಣಿವೆ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಆರ್ಭಟಿಸುತ್ತಿರುವ ಮುಂಗಾರು ಮಳೆಯ ಅಬ್ಬರ ಕ್ಷೀಣಗೊಳ್ಳಲಿದ್ದು, ಮುಂದಿನ ಐದು ದಿನಗಳಲ್ಲಿ ತುಂತುರುವಿನಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ತಜ್ಞರು ನೀಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಜು.20 ರಿಂದ 24ರ ಅವದಿಯಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ಸಾಧಾರಣ ಮಳೆಯಾಗಲಿದೆ. ಇದೇ ಅವಧಿಯಲ್ಲಿ ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ತುಂತುರು ಮಳೆಯಾಗಲಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ ತುಂತುರುವಿನಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಈ ನಾಲ್ಕು ಜಿಲ್ಲೆಗಳಲ್ಲಿ ದೀರ್ಘಾವಧಿ ಹವಾಮಾನ ಮುನ್ಸೂಚನೆ ಪ್ರಕಾರ ಜು.22 ರಿಂದ 28ರವರೆಗೆ ಸರಾಸರಿ ಮಳೆಯಾಗುವ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ. ಪ್ರಕಾಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.