ಮುಂಗಾರು ಮುನ್ನವೇ ವರ್ಷಧಾರೆ ಆಗಮನ ; ಗರಿಗೆದರಿದ ಕೃಷಿ ಚಟುವಟಿಕೆ

CNH WEB
Published on

ತುಮಕೂರು : ಜಿಲ್ಲೆಯಲ್ಲಿ ಮುಂಗಾರು ಪ್ರವೇಶಿಸುವ ಮುಂಚೆಯೇ ಮಳೆ ಸುರಿಯಲಾರಂಭಿಸಿದೆ, ಬುಧವಾರ ರಾತ್ರಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭರ್ಜರಿ ಮಳೆ ಸುರಿದಿದ್ದು ಕೃಷಿ ಚಟುವಟಿಕೆ ಗರಿಗೆದರಿವೆ. ಈ ನಡುವೆ ಚೀನಾದಿಂದ ಅನಾಮದೇಯರ ಹೆಸರಿನಲ್ಲಿ ಬಿತ್ತನೆ ಬೀಜಗಳು ರೈತರ ಮನೆ ಬಾಗಿಲಿಗೆ ಬರುತ್ತಿರುವುದು ಆತಂಕ ಹೆಚ್ಚಿಸಿದೆ.

ನಿರೀಕ್ಷೆಯಂತೆ ಬುಧವಾರ ರಾತ್ರಿ ಮಳೆ ಸುರಿಯಿತು, ಗುಬ್ಬಿ ಕಸಬಾ ಹೋಬಳಿಯಲ್ಲಿ ಅತೀ ಹೆಚ್ಚು 120.5ಮಿಮೀ, ತುಮಕೂರು ತಾಲೂಕು ನೆಲಹಾಳ್​ನಲ್ಲಿ 104.2ಮಿಮೀ, ಹೆಬ್ಬೂರಿನಲ್ಲಿ 101.2ಮಿಮೀ, ಚಿಕ್ಕನಾಯಕನಹಳ್ಳೀ ತಾಲೂಕು ಹುಳಿಯಾರಿನಲ್ಲಿ 100.2ಮಿಮೀ ಮಳೆ ಸುರಿದಿದ್ದು, ಒಣಗಿದ್ದ ಹೆಸರು ಬೆಳೆಗೆ ಜೀವ ಬಂದಿದೆ.

ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಭರ್ಜರಿ ಮಳೆ ಸುರಿದಿದ್ದು ಚಿಕ್ಕನಾಯಕನಹಳ್ಳಿಯಲ್ಲಿ 19.8ಮಿಮೀ, ಹುಳಿಯಾರು 100.2ಮಿಮೀ, ಶೆಟ್ಟಿಕೆರೆ 42.3ಮಿಮೀ, ಬೋರನಕಣಿವೆ 50.4, ಮತಿಘಟ್ಟ 52.2, ದೊಡ್ಡಎಣ್ಣೆಗೆರೆ 16.2 ಹಾಗೂ ಸಿಂಗದಹಳ್ಳಿ ಮಳೆಮಾಪನ ಕೇಂದ್ರದಲ್ಲಿ 25.4ಮಿಮೀ ಮಳೆ ದಾಖಲಾಗಿದೆ. ಗುರುವಾರ ತಾಲೂಕಿನಲ್ಲಿ ಶೇ.14.8 ಮಿಮೀ ಮಳೆ ನಿರೀಕ್ಷೆಯಿದೆ.

ಪಾವಗಡ ತಾಲೂಕು ವೈ.ಎನ್.ಹೊಸಕೋಟೆಯಲ್ಲಿ 22ಮಿಮೀ ಮಳೆಯಾಗಿದ್ದು ಬಿಟ್ಟರೆ ಉಳಿದಂತೆ ಎಲ್ಲಿಯೂ ಹೆಚ್ಚು ಮಳೆಯಾಗಿಲ್ಲ, ಪಾವಗಡ 2ಮಿಮೀ, ನಾಗಲಮಡಿಕೆ 8.2ಮಿಮೀ, ತಿರುಮಣಿ 6ಮಿಮೀ ಮಳೆಯಾಗಿದ್ದು ತಾಲೂಕಿನ ಜನರು ಮಳೆಯನ್ನು ಬಯಸುತ್ತಿದ್ದಾರೆ, ಗುರುವಾರ 13.1ಮಿಮೀ ಮಳೆ ಬರುವ ನಿರೀಕ್ಷೆಯಿತ್ತು.

ಮಧುಗಿರಿಯಲ್ಲಿ 6ಮಿಮೀ, ಮಿಡಿಗೇಶಿ 10ಮಿಮೀ, ಬಡುವನಹಳ್ಳಿ 15, ಬ್ಯಾಲ್ಯ 5.1ಮಿಮೀ ಮಳೆಯಾಗಿದ್ದು ಗುರುವಾರ 11.1ಮಿಮೀ ಮಳೆ ಬೀಳುವ ಸಾಧ್ಯತೆಯಿದೆ. ತಿಪಟೂರು ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ನೊಣವಿನಕೆರೆ 12.4ಮಿಮೀ, ಕಿಬ್ಬನಹಳ್ಳಿ 6.2, ಹಾಲ್ಕುರಿಕೆ 55.2, ಹೊನ್ನವಳ್ಳಿ 46.2 ಹಾಗೂ ಕಸಬಾ ಹೋಬಳಿಯಲ್ಲಿ 13.8 ಮಿಮೀ ಮಳೆ ಸುರಿದಿದೆ. ಗುರುವಾರ 10.8ಮಿಮೀ ಮಳೆ ನಿರೀಕ್ಷೆಯಿದೆ.

ತುರುವೇಕೆರೆ 16.6ಮಿಮೀ, ದಂಡಿನಶಿವರ 6.1, ಮಾಯಸಂದ್ರ 54.2, ದೆಬ್ಬೇಘಟ್ಟ 10.2, ಸಂಪಿಗೆಯಲ್ಲಿ 65ಮಿಮೀ ಮಳೆಯಾಗಿದ್ದು ಗುರುವಾರ 32.1ಮಿಮೀ ಮಳೆಯ ನಿರೀಕ್ಷೆ ಇತ್ತು. ಕೊರಟಗೆರೆ ತಾಲೂಕು ತೋವಿನಕೆರೆ10.2ಮಿಮೀ, ಕೊಳಾಲ 25.2, ಇರಕಸಂದ್ರ 3.6, ಹೊಳವನಹಳ್ಳಿ 4.6ಮಿಮೀ ಮಳೆಯಾಗಿದೆ.

ಶಿರಾ ತಾಲೂಕು ಕಳ್ಳಂಬೆಳ್ಳದಲ್ಲಿ 86.6ಮಿಮೀ, ಚಿಕ್ಕನಹಳ್ಳಿ 70, ಬುಕ್ಕಾಪಟ್ಟಣ 62.4, ತಾವರೇಕೆರೆ 14, ಹುಣುಸೆಹಳ್ಳಿ 12.4 ಹಾಗೂ ಬರಗೂರಿನಲ್ಲಿ 13.2ಮಿಮೀ ಮಳೆಯಾಗಿದೆ. ತುಮಕೂರು ತಾಲೂಕಿನಲ್ಲಿ ಗುಡುಗು ಸಹಿತ ಮಳೆ ಸುರಿದಿದ್ದು ಕಸಬಾ 48.8, ರೈಲ್ವೆ ನಿಲ್ದಾಣ 60, ಬೆಳ್ಳಾವಿ 57.4, ಊರ್ಡಿಗೆರೆ 12.1, ಹಿರೇಹಳ್ಳಿ 54.2ಮಿಮೀ ಮಳೆಯಾಗಿದೆ.

ಗುಬ್ಬಿ ತಾಲೂಕಿನಲ್ಲಿ ಉತ್ತರ ಮಳೆ ದಾಖಲಾಗಿದ್ದು ಕಸಬಾದಲ್ಲಿ 1.20ಸೆಮೀ, ಚೇಳೂರು 50ಮಿಮೀ, ಹಾಗಲವಾಡಿ 35ಮಿಮೀ, ನಿಟ್ಟೂರು 25, ಕಡಬ 77.6, ಅಂಕಸಂದ್ರ 35 ಹಾಗೂ ಸಿ.ಎಸ್.ಪುರ ಮಳೆಮಾಪನ ಕೇಂದ್ರದಲ್ಲಿ 24 ಮಿಮೀ ಮಳೆ ದಾಖಲಾಗಿದೆ. ಪಾವಗಡ ಹೊರತುಪಡಿಸಿ ಜಿಲ್ಲೆಯ ಬಹುತೇಕ ಭಾಗದಲ್ಲಿ ಉತ್ತಮ ಮಳೆಯಾಗಿದ್ದು ಮುಂಗಾರು ಆರಂಭಕ್ಕೂ ಮುಂಚೆಯೇ ರೈತರಿಗೆ ಆಶಾಭಾವನೆ ಮೂಡಿಸಿದೆ. ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಹೆಸರು, ತೊಗರಿ ಬಿತ್ತನೆಯಾಗಿದ್ದು ತಡವಾಗಿಯಾದರೂ ಮಳೆಯಾಗಿರುವುದು ರೈತರಿಗೆ ನೆರವಾಗಿದೆ. ಕೆಲವರ ಬೆಳೆ ಈಗಾಗಲೇ ಸೊರಗಿದ್ದು ರಾಗಿ ಬೆಳೆಯಲು ಸಿದ್ಧತೆ ಮಾಡಿಕೊಳ್ಳಲು ಸಕಾಲವಾಗಿದೆ.

ವಿದೇಶಿ ಬಿತ್ತನೆ ಬೀಜ ಬಂದೀತು ಎಚ್ಚರ! : ಚೀನಾದಿಂದ ಅನಾಮಧೇಯರು ಕೋರಿಯರ್, ಅಂಚೆ ಮೂಲಕ ರೈತರಿಗೆ ಬಿತ್ತನೆ ಬೀಜ ಕಳುಹಿಸುತ್ತಿರುವ ಬಗ್ಗೆ ರಾಜ್ಯದ ವಿವಿಧೆಡೆ ದೂರುಗಳಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಜಾಗೃತರಾಗಿರಬೇಕು ಎಂದು ಕೃಷಿ ಇಲಾಖೆ ಮನವಿ ಮಾಡಿದೆ. ಕೀಟ ಮತ್ತು ರೋಗಾಣುಗಳಿಂದ ಕೂಡಿದ್ದು, ಬಿತ್ತನೆ ಮಾಡಿದರೆ ಬೆಳೆ ಸಂಪೂರ್ಣ ನಾಶವಾಗುವ, ಭೂಮಿಯ ಫಲವತ್ತತೆ ಕೂಡ ನಶಿಸುವ ಅಪಾಯವಿರುವ ಬೀಜಗಳು ಈಗಾಗಲೇ ಚೀನಾದಿಂದ ಇಂಗ್ಲೆಂಡ್, ಕೆನಡಾ ಮತ್ತಿತರ ದೇಶದಿಂದ ಇಂತಹ ಬೀಜ ಬರುತ್ತಿರುವ ಬಗ್ಗೆ ವರದಿಯಾಗಿದ್ದು ಭಾರತದಲ್ಲಿಯೂ ರೈತರಿಗೆ ಎಚ್ಚರಿಕೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ರೈತರು ಹರ್ಷವಾಗಿದ್ದಾರೆ, ಇದೇ ಸಮಯದಲ್ಲಿ ಆಘಾತಕಾರಿ ಬಿತ್ತನೆ ಬೀಜ ಚೀನಾದಿಂದ ಕಳುಹಿಸಲಾಗಿದೆ ಎಂಬ ಶಂಕೆಯಿದೆ, ವಿವಿಧ ತಳಿಗಳ ಬಿತ್ತನೆ ಬೀಜದ ಈ ಪೊಟ್ಟಣಗಳನ್ನು ಯಾರು, ಎಲ್ಲಿಂದ ಕಳುಹಿಸಿರುತ್ತಾರೆ ಎಂಬ ವಿವರ ಲಭ್ಯವಿರುವುದಿಲ್ಲ. ಹಾಗಾಗಿ, ಇಂತಹ ಬೀಜದ ಬಳಕೆಯಿಂದ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ ಮತ್ತು ಕ್ರಮೇಣವಾಗಿ ಕೃಷಿ ಭೂಮಿ ಬಂಜರಾಗುವ ಅಪಾಯವಿದೆ. ಇಂತಹ ಪೊಟ್ಟಣದ ಬಂದರೆ ಸ್ವೀಕರಿಸದೇ ರೈತರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. | ರಾಜಸುಲೋಚನಾ ಜಂಟಿ ಕೃಷಿ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net