ಬೆಳಗಾವಿ ಜಿಲ್ಲೆಯ 15 ಸೇತುವೆ ಮುಳುಗಡೆ ; ಮುಂದುವರಿದ ವರುಣಾರ್ಭಟ

IMG-20230720-WA0142.jpg
Published on

ಬೆಳಗಾವಿ : ಜಿಲ್ಲೆಯಾದ್ಯಂತ ಗುರುವಾರ ರಾತ್ರಿಯೂ ಎಡೆಬಿಡದೆ ಬಿದ್ದ ಮಳೆಗೆ ಜಿಲ್ಲಾದ್ಯಂತ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ಜಿಲ್ಲೆಯ 15 ಸೇತುವೆ ಸಂಪೂರ್ಣ ಮುಳುಗಡೆಯಾಗಿವೆ. ಮಳೆ ಶುಕ್ರವಾರವೂ ಮಳೆ ಅಬ್ಬರಿಸಿದ್ದು, ನಗರ ಮತ್ತು ಪಟ್ಟಣದ ರಸ್ತೆಗಳು ಹಾಗೂ ಗ್ರಾಮೀಣ ಭಾಗದ ಜಮೀನಿನ ಬೆಳೆಗಳು ಜಲಾವೃತವಾಗಿವೆ.

ಕಳೆದ ಮೂರು ದಿನದಿನಗಳಿಂದ ಕಾರ್ಮೋಡಗಳ ಒಡಲಿಂದ ಮಾಲೆ ಮಾಲೆಯಾಗಿ ಪುಷ್ಯ ಮಳೆ ಹನಿಗಳು ಸುರಿಯುತ್ತಿದ್ದರಿಂದ ಜಿಲ್ಲೆಯ ಹಳ್ಳಕೊಳ್ಳಗಳು ಮಾತ್ರವಲ್ಲದೇ ಏಳು ನದಿಗಳು ಮೈದುಂಬಿ ಹರಿಯುತ್ತಿದ್ದು, ಘಟಪ್ರಭಾ ಹಾಗೂ ಮಲಪ್ರಭಾ ಜಲಾಶಯಗಳಿಗೆ ಒಳ ಹರಿವು ಮತ್ತಷ್ಟು ಹೆಚ್ಚಾಗಿದೆ. ರಕ್ಕಸಕೊಪ್ಪ ಜಲಾಶಯ ಬರ್ತಿಯಾಗಿದ್ದು, ಜಿಲ್ಲೆಯ ಎಲ್ಲ ಜಲಮೂಲಗಳಿಗೆ ಇದೀಗ ಜೀವಕಳೆ ಬಂದಿದೆ.  
 

ಬೆಳಗಾವಿ ನಗರ ಹಾಗೂ ತಾಲೂಕು ಸೇರಿದಂತೆ ಖಾನಾಪುರ, ಬೈಲಹೊಂಗಲ, ಕಿತ್ತೂರು, ಸವದತ್ತಿ, ಮೂಡಲಗಿ, ಹುಕ್ಕೇರಿ, ಗೋಕಾಕ್, ನಿಪ್ಪಾಣಿ, ಅಥಣಿ, ತಾಲೂಕಿನ ಹಲವೆಡೆ ವರುಣ ಆರ್ಭಟಿಸಿದ್ದು, ಮಧ್ಯಾಹ್ನದ ಬಳಿಕ ಸ್ವಲ್ಪ ಬಿಡುವು ನೀಡಿದ್ದ ಮಳೆರಾಯ ಸಂಜೆ ಮತ್ತೇ ಜೋರಾಯಿತು. ಬರಿದಾಗಿದ್ದ ಮಲಪ್ರಭಾ, ಘಟಪ್ರಭಾ, ಕೃಷ್ಣಾ, ದೂದಗಂಗಾ, ವೇದಗಂಗಾ, ಹಿರಣ್ಯಕೇಶಿ ಹಾಗೂ ಮಾಕಂಡೇಯ ನದಿಗಳಲ್ಲಿ ನೀರಿನ ಆರ್ಭಟ ಹೆಚ್ಚಾಗಿದೆ. ಭೋಜ-ಕಾರಡಗಾ, ಭೋಜವಾಡಿ-ನಿಪ್ಪಾಣಿ, ಮಲ್ಲಿಕವಾಡ-ದತ್ತವಾಡ, ಬರ‌್ವಾಡ್-ಕುನ್ನೂರ, ಸಿದ್ನಾಳ-ಅಕ್ಕೋಳ, ಭೋಜ್-ಕುನ್ನೂರ, ಜತ್ರಾಟ-ಭಿವಶಿ, ಮಾಂಜರಿ-ಭಾವನಸೌಂದತ್ತಿ, ಮಂಗಾವತಿ-ರಾಜಾಪುರ, ಗೋಕಾಕ್ ಹಿಲ್-ಶಿಂಗಳಾಪುರ, ಕುರ್ಣಿ-ಕೊಚಾರಿ, ಶೆಟ್ಟಿಹಳ್ಳಿ-ಮಾರನಹೊಳ್ಳ ಹಾಗೂ ಖಾನಾಪುರ-ಹೆಮ್ಮಡಗಾ ಸೇತುವೆಗಳ ಮೇಲೆ ಅಪಾಯ ಮಟ್ಟದಲ್ಲಿ ನದಿ ನೀರು ಹರಿಯುತ್ತಿದ್ದು, ಮುನ್ನೆಚ್ಚರಿಕೆಯಿಂದ ಸಂಚಾರ ನಿರ್ಬಂಧಿಸಿ, ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಬೆಳಗಾವಿ ನಗರದಲ್ಲಿ ನಿರಂತರವಾಗಿ ಸುರಿದ ಮಳೆಗೆ ಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಗಳ ಮೇಲೆ ಹರಿದಾಡಿತು. ಬಹುತೇಕ ಕಡೆ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡಿದರು. ಜಿಲ್ಲೆಯ ಹಲವೆಡೆ ರಭಸದ ಗಾಳಿ ಮಳೆಗೆ ಕೆಲವೆಡೆ ಮರಗಳು, ರೆಂಬೆಕೊಂಬೆಗಳು ನೆಲಕ್ಕೆ ಉರುಳಿ ಬಿದ್ದಿದ್ದರಿಂದ ಸಂಚಾರ ದುಸ್ತರವಾಗಿ, ಜನಜೀವನ ಅಸ್ತವ್ಯಸ್ಥವಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯಿಂದ ಉಂಟಾದ ಅನಾನುಕೂಲತೆ ಸರಿಪಡಿಸಲು, ಅರಣ್ಯ ಇಲಾಖೆ, ಪೊಲೀಸ್, ಪಾಲಿಕೆಯ ನೈರ್ಮಲ್ಯ ಮತ್ತು ತ್ವರಿತ ಪ್ರತಿಕ್ರಿಯೆ ತಂಡಗಳು ಕಾರ್ಯನಿರತವಾಗಿದ್ದವು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net