ಹೆದ್ದಾರಿ ಸಂಚಾರ ಸುಗಮವಾಗಲಿ: ನಗರದಲ್ಲಿ ಮಳೆ ಹಾನಿ ಕುರಿತ ಸಭೆ

Kopaliha
Published on

ಮಂಡ್ಯ: ಮಳೆಯಿಂದಾಗಿ ಗಿಡಗೆಂಟೆಗಳು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬಿದ್ದಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಅವುಗಳನ್ನು ತ್ವರಿತವಾಗಿ ತೆರವುಗೊಳಿಸಬೇಕು ಎಂದು ಕಾವೇರಿ ನೀರಾವರಿ ನಿಗಮ ಹಾಗೂ ಎನ್‌ಎಚ್ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಳೆ ಹಾನಿ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಪರಿಹಾರ ಪಾವತಿ ಸಂಬಂಧ ಕೈಗೊಂಡಿರುವ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಹೆಚ್ಚು ಹಾನಿಯಾಗಿದೆ. ಅಧಿಕಾರಿಗಳು ತುರ್ತಾಗಿ ಪರಿಶೀಲನೆ ಮಾಡಿ ಪರಿಹಾರದ ಹಣ ನೀಡಿ. ಜನ ಸಾಮಾನ್ಯರು ಬಹಳ ಕಷ್ಟದಲ್ಲಿ ಸಿಲುಕಿದ್ದಾರೆ.ಅವರ ನೋವಿಗೆ ಸ್ಪಂದಿಸಬೇಕು ಎಂದರು.
ಭಾರೀ ಮಳೆಯ ಹಿನ್ನಲೆ ನಗರದ ಬೀಡಿ ಕಾಲನಿಯ ಮನೆಗಳಿಗೆ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ನೀಡಲಾಗುವ ತಲಾ 10 ಸಾವಿರ ರೂ ತುರ್ತು ಪರಿಹಾರವನ್ನು ಕೂಡಲೇ ಒದಗಿಸಬೇಕು. ಕಾಲನಿಯ ಮನೆಗಳಿಗೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಬೇಕು. ಕೆಳ ಮಹಡಿ ಮನೆಗಳಲ್ಲಿ ವಾಸವಾಗಿರುವವರಿಗೆ ಹಣ ದೊರಕುವಂತೆ ನೋಡಿಕೊಳ್ಳಬೇಕು. ಯಾರು ಕೂಡ ಪರಿಹಾರದಿಂದ ವಂಚಿತರಾಗಬಾರದು ಎಂದರು.
ಜಿಲ್ಲಾಧಿಕಾರಿ ಎಸ್.ಅಶ್ವಥಿ, ಡಾ.ಎಚ್.ಎಲ್.ನಾಗರಾಜು, ಎನ್.ಯತೀಶ್, ಶಿವಾನಂದಮೂರ್ತಿ, ಆರ್.ಐಶ್ವರ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net