ಭಾರಿ ಮಳೆಗೆ ಮನೆಗಳಿಗೆ ನೀರು: ಲಿಂಗಪಟ್ಟಣದಲ್ಲಿ ಅವಾಂತರ

IMG-20221021-WA0018
Published on

ಮಂಡ್ಯ: ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮಳವಳ್ಳಿ ತಾಲೂಕಿನ ಲಿಂಗಪಟ್ಟಣ ಗ್ರಾಮದಲ್ಲಿ ಹಲವಾರು ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟವಾಗಿದೆ.

ಹಲವು ವರ್ಷಗಳಿಂದ ಮಳೆ ಇಲ್ಲದೆ ಗ್ರಾಮದ ದನದ ಓಣಿ ಹಳ್ಳ ಮುಚ್ಚಿ ಹೋಗಿತ್ತು. ತ್ಯಾಜ್ಯವನ್ನು ಹಳ್ಳಕ್ಕೆ ಸುರಿದ ಪರಿಣಾಮ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದ ಕಾರಣ ಭಾರಿ ಮಳೆಗೆ ಹಲವಾರು ಮನೆಗಳಿಗೆ ನೀರು ನುಗ್ಗಿದೆ.

ಮನೆಯ ಆವರಣದಲ್ಲಿ ಸಂಗ್ರಹಿಸಿಟ್ಟಿದ್ದ ಸಾವಿರಾರು ತೆಂಗಿನಕಾಯಿಗಳು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿವೆ. ಮನೆಯಲ್ಲಿ ಕೂಡಿ ಹಾಕಿದ್ದ ಸುಮಾರು ಹದಿನೈದು ನಾಟಿ ಕೋಳಿಗಳು ಸತ್ತು ಹೋಗಿವೆ. ದವಸ ಧಾನ್ಯಗಳು ಮಳೆ ನೀರಿನಲ್ಲಿ ಒದ್ದೆಯಾಗಿವೆ. ಮನೆಗಳಲ್ಲಿ ಸುಮಾರು ನಾಲ್ಕು ಅಡಿಗಳಷ್ಟು ನೀರು ನಿಂತಿದ್ದು, ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಪಶುಗಳಿಗೆ ಬಳಸಲು ತಂದಿದ್ದ ಆಹಾರದ ಚೀಲಗಳು ನೀರಿನಲ್ಲಿ ಒದ್ದೆಯಾಗಿವೆ. ಸ್ಥಳೀಯ ಆಡಳಿತ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಸಂತ್ರಸ್ತರಾದ ಶೋಭಾ, ಪದ್ಮಾ, ರಮ್ಯಾ, ಸುಶೀಲಮ್ಮ ಸೇರಿದಂತೆ ಹಲವರು ಮನವಿ ಮಾಡಿದರು.

ರಾತ್ರಿ ಸುರಿದ ಮಳೆಗೆ ಮೋರಿಗೆ ಕಸ ಕಟ್ಟಿಕೊಂಡು ಹಳ್ಳದ ನೀರು ಗ್ರಾಮದ ಬೀದಿ ಮತ್ತು ಮನೆಗಳಿಗೆ ನುಗ್ಗಿ ತೊಂದರೆಯಾಗಿದೆ. ಕೂಡಲೇ ಜೆಸಿಬಿ ಮೂಲಕ ಹಳ್ಳದಲ್ಲಿರುವ ತ್ಯಾಜ್ಯ ತೆರವು ಮಾಡಲಾಗುವುದು ಎಂದು ಗ್ರಾಮ ಪಂಚಾಯಿತಿ ಸದಸ್ಯ ಪಾಪಣ್ಣ ತಿಳಿಸಿದರು.

ಶಾಲೆಯೊಳಗೆ ನೀರು:

ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕೆಳ ಅಂತಸ್ತಿನ ಮೂರು ಕೊಠಡಿಗಳಿಗೆ ಮಳೆ ನೀರು ತುಂಬಿಕೊಂಡಿತ್ತು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ಕೊಠಡಿಯಲ್ಲಿ ತುಂಬಿದ್ದ ನೀರನ್ನು ಹೊರ ಹಾಕಿದರು. ಹಲವು ವರ್ಷಗಳ ಹಿಂದೆ ಜಲಾನಯನ ಇಲಾಖೆ ಶಾಲೆಯಿಂದ ಕೂಗಳತೆ ದೂರದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ. ಇದರಿಂದ ಸರಿಯಾಗಿ ನೀರು ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಚೆಕ್ ಡ್ಯಾಂ ತೆರವು ಮಾಡಿದರೆ ಶಾಲೆಗೆ ನೀರು ತುಂಬಿಕೊಳ್ಳುವುದು ತಪ್ಪಲಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ವಿನಯ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net