

ನಾಗಮಂಗಲ: ಪಟ್ಟಣದಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಜಲಾವೃತವಾದರೆ, ಹಲವು ವಾರ್ಡ್‌ಗಳಿಗೆ ನೀರು ನುಗ್ಗಿ ಜನರು ಪರದಾಡಿದರು.
ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಹಲವೆಡೆ ಕೆರೆಗಳು ಕೋಡಿ ಬಿದ್ದ ಪರಿಣಾಮ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಪಟ್ಟಣ ವ್ಯಾಪ್ತಿಯಲ್ಲಿರುವ ಹಿರಿಕೆರೆ ತುಂಬಿರುವ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ಡಿಪೋ ಸಂಪೂರ್ಣವಾಗಿ ಜಲಾವೃತಗೊಂಡು ಕೆರೆಯಂತಾಗಿದೆ.
ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಹತ್ತಾರು ಬೈಕ್‌ಗಳು ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗುವ ಸನ್ನಿವೇಶ ನಿರ್ಮಾಣವಾಗಿತ್ತು. ಅಲ್ಲದೇ, ಹೆದ್ದಾರಿ ಬದಿಯಲ್ಲಿರುವ ಹಾರ್ಡ್‌ವೇರ್ ಅಂಗಡಿ, ಕಂಪ್ಯೂಟರ್ ಸೆಂಟರ್, ಮೆಕಾನಿಕ್ ಅಂಗಡಿ, ಹೋಟೆಲ್ ಸೇರಿದಂತೆ ವಿವಿಧ ಅಂಗಡಿಗಳಿಗೆ ನೀರು ನುಗ್ಗಿ ವಸ್ತುಗಳು ಹಾನಿಯಾಗಿವೆ.
ಪಟ್ಟಣ ವ್ಯಾಪ್ತಿಯ ಅಮ್ಮನಕಟ್ಟೆ ಕೆರೆ ತುಂಬಿಕೊಂಡಿದ್ದು, ಹೆದ್ದಾರಿ ಮೇಲೆ ನೀರು ವೇಗವಾಗಿ ಹರಿಯುತ್ತಿದೆ. ಪಾಲಗ್ರಹಾರ ರಸ್ತೆಯ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಪಟ್ಟಣದ ಕೆಲ ವಾರ್ಡ್‌ಗಳ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ.
ಶಾಸಕ ಸುರೇಶ್‌ಗೌಡ ಪರಿಶೀಲನೆ: ಮಳೆಯಿಂದ ಪಟ್ಟಣ ಬಸ್ ನಿಲ್ದಾಣ ಹಾಗೂ ಹಲವು ವಾರ್ಡ್‌ಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಶಾಸಕ ಸುರೇಶ್‌ಗೌಡ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ರಾಜಕಾಲುವೆ ಒತ್ತುವರಿಯಿಂದ ನೀರು ಬಸ್ ನಿಲ್ದಾಣಕ್ಕೆ ಹಾಗೂ ಅಂಗಡಿಗಳಿಗೆ ನೀರು ನುಗ್ಗುತ್ತಿರುವ ಬಗ್ಗೆ ವಿಷಯ ತಿಳಿದು, ಇನ್ನೊಂದು ವಾರದೊಳಗೆ ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಬೇಕು ಎಂದು ತಹಸೀಲ್ದಾರ್ ನಂದೀಶ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಅಮೃತಾ ಅವರಿಗೆ ಸೂಚಿಸಿದರು.