ಮಳೆ ಅವಾಂತರಕ್ಕೆ ಕುಷ್ಟಗಿ ಜನಜೀವನ ಅಸ್ತವ್ಯಸ್ತ, ಕೊಚ್ಚಿ ಹೋದ ಬೈಕ್

Kushtagi Huliyapura Lake
ಕುಷ್ಟಗಿ ತಾಲೂಕಿನ ಹುಲಿಯಾಪುರ ಕೆರೆ ತುಂಬಿ ಹರಿಯುತ್ತಿದೆ.
Published on

ಕುಷ್ಟಗಿ: ಮೂರು ದಿನಗಳಿಂದ ಧಾರಾಕಾರ ಸುರಿಯುತ್ತಿರುವ ಮಳೆಗೆ ತಾಲೂಕಿನ ಕೆರೆ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಮೀನುಗಳು ಜಲಾವೃತಗೊಂಡಿವೆ. ಹಲವೆಡೆ ಮನೆಗಳು ಕುಸಿದು ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ.

ಹಿಂಗಾರು ಹಂಗಾಮಿಗೆ ಬಿತ್ತನೆ ಕೈಗೊಳ್ಳಲು ಜಮೀನು ಸಿದ್ಧಪಡಿಸಿಕೊಂಡಿರುವ ರೈತರಲ್ಲಿ ಅರ್ಧದಷ್ಟು ರೈತರು ಬಿತ್ತನೆ ಕೈಗೊಂಡರೆ ಉಳಿದ ರೈತರಿಗೆ ಮಳೆ ಅಡ್ಡಿಪಡಿಸಿದೆ. ಮಣ್ಣಿನ ಮಾಳಿಗೆಯ ಮನೆಗಳು ಕುಸಿದು ಬೀಳುತ್ತಿದ್ದರೆ, ನೂರಾರು ಹೆಕ್ಟೇರ್ ಬೆಳೆ ಹಾನಿಯಾದ ವರದಿಯಾಗಿದೆ. ಮಳೆಯಾದಾಗಲೊಮ್ಮೆ ತಾಲೂಕಿನ ಬನ್ನೆಟ್ಟಿ ಹಳ್ಳಕ್ಕೆ ನೀರು ಹರಿದು ಬಂದು ಸಂಚಾರ ಸ್ಥಗಿತಗೊಳ್ಳುತ್ತಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ತಾತ್ಕಾಲಿಕ ಸೇತುವೆಯೂ ಕೊಚ್ಚಿಹೋಗಿದೆ. ಇನ್ನು, ತಾಲೂಕಿನ ವಣಗೇರಾ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಬಹುತೇಕರು ಹೈರಾಣಾಗಿದ್ದಾರೆ.

ತುಂಬಿ ಹರಿದ ನಿಡಶೇಸಿ ಕೆರೆ
ತಾಲೂಕಿನ ನಿಡಶೇಸಿ ಸೇರಿ ವಿವಿಧ ದೊಡ್ಡ ಹಾಗೂ ಜಿನುಗು ಕೆರೆಗಳಲ್ಲಿ ನೀರು ಸಂಗ್ರಹ ಪ್ರಮಾಣ ಹೆಚ್ಚಿದೆ. ತಾಲೂಕಿನ ಹುಲಿಯಾಪುರ ಕೆರೆ ತುಂಬಿ ಹರಿಯುತ್ತಿದ್ದು, ಹರಿಯುವ ಜಲಧಾರೆ ವೀಕ್ಷಿಸಲು ಜನರ ದಂಡು ಕೆರೆಯತ್ತ ಧಾವಿಸುತ್ತಿದೆ. ಕೆರೆ, ಹಳ್ಳಗಳು ತುಂಬಿ ಹರಿಯುತ್ತಿರುವುದು ಒಂದೆಡೆ ಸಂತಸ ತಂದರೆ ಬೆಳೆ ಹಾನಿ ಹಾಗೂ ಬಿತ್ತನೆಗೆ ಅಡ್ಡಿಪಡಿಸುತ್ತಿರುವ ಮಳೆ ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಕೊಚ್ಚಿ ಹೋದವರ ರಕ್ಷಣೆ
ಪ್ರತ್ಯೇಕ ಘಟನೆಗಳಲ್ಲಿ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಬೈಕ್ ಸವಾರರನ್ನು ಸೋಮವಾರ ತಡರಾತ್ರಿ ರಕ್ಷಿಸಿದ್ದಾರೆ. ಬದಾಮಿ ತಾಲೂಕು ಜಾಲಿಹಾಳ ಜಲಪಾತ ವೀಕ್ಷಿಸಿ ಹಿಂತಿರುಗುತ್ತಿದ್ದ ಬಂಡ್ರಗಲ್ ಗ್ರಾಮದ 6 ಜನ ಬೈಕ್ ಸವಾರರ ಪೈಕಿ ಹಳ್ಳದ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಮಂಜುನಾಥ ಗಂಗಾಧರಪ್ಪನನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಕಾಟಾಪುರ-ಬಂಡ್ರಗಲ್ ಮಧ್ಯೆ ಹರಿಯುವ ಹಳ್ಳದ ಹರಿವು ಹೆಚ್ಚಾಗಿ ರಸ್ತೆ ಮಧ್ಯೆ ನೀರಿನ ರಭಸ ಹೆಚ್ಚಾಗಿದೆ. ಸ್ನೇಹಿತರು ಬೇಡವೆಂದರೂ ದುಸ್ಸಾಹಸಕ್ಕೆ ಮುಂದಾದ ಮಂಜುನಾಥ, ಗ್ರಾಮಸ್ಥರು ರಕ್ಷಣೆಗೆ ಮುಂದಾಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಬೈಕ್ ಮಾತ್ರ ಕೊಚ್ಚಿ ಹೋಗಿದೆ.
ಬಂಡ್ರಗಲ್ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ಬೈಕ್ ಸವಾರರಾದ ಬಸವನ ಬಾಗೇವಾಡಿ ಮೂಲದ ವೀರೇಶ ಹಡಪದ್ ಹಾಗೂ ಮುತ್ತಪ್ಪ ಎನ್ನುವವರು ಹೂಲಗೇರಾ-ಬಂಡರಗಲ್ ಮಧ್ಯೆ ಹರಿಯುವ ಹಳ್ಳದ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದಾಗ ಅಲ್ಲೂ ಗ್ರಾಮಸ್ಥರು ರಕ್ಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net