ದ್ರಾಕ್ಷಿಗೆ ಆತಂಕ, ಮಾವಿಗೆ ತುಸು ನಿರಾತಂಕ!

dra
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಬಂಗಾಳಕೊಲ್ಲಿಯ ಆಗ್ನೇಯ ದಿಕ್ಕಿನಲ್ಲಿ ತೇವಾಂಶ ಭರಿತ ಮೋಡಗಳ ಕಾರಣ ಸುರಿಯುತ್ತಿರುವ ಬೇಸಿಗೆ ಮಳೆಯಿಂದಾಗಿ ಜಿಲ್ಲೆಯಲ್ಲಿನ ದ್ರಾಕ್ಷಿ ಬೆಳೆಗಾರರು ಆತಂಕಕ್ಕೊಳಲಾಗಿದ್ದಾರೆ. ಆದರೆ ಅದೃಷ್ಟವಶಾತ್ ಬಿರುಗಾಳಿ ಅಥವಾ ಆಲಿಕಲ್ಲು ಮಳೆಯಿಲ್ಲದ ಕಾರಣ ಮಾವಿನ ಬೆಳೆಗಾರರು ಸದ್ಯಕ್ಕೆ ನಿರಾತಂಕವಾಗಿದ್ದಾರೆ.

ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ದ್ರಾಕ್ಷಿ ಬೆಳೆಗಾರರಿದ್ದು, ಸುಮಾರು 2024 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ಏಪ್ರಿಲ್ ಅಂತ್ಯದಲ್ಲಿ ದ್ರಾಕ್ಷಿ ಕಟಾವು ಪ್ರಕ್ರಿಯೆ ಆರಂಭವಾಗಲಿದೆ, ಆದರೆ ಜಿಲ್ಲೆಯಲ್ಲಿ ಇನ್ನು ಮೂರ‌್ನಾಲ್ಕು ದಿನ ಮಳೆ ಸುರಿಯಲಿದೆ ಎಂಬ ಹವಾಮಾನ ಸೂಚನೆ ದ್ರಾಕ್ಷಿ ಬೆಳೆಗಾರರನ್ನು ಕಂಗೆಡಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎಂಬ ಆತಂಕ ಮನೆ ಮಾಡಿದೆ. ಏತನ್ಯಧ್ಯೆ ಗೋಲಿಯಾಕರದಿಂದ ನಿಂಬೆಯಷ್ಟು ದಪ್ಪದಾಗಿರಿರುವ ಮಾವಿನ ಬೆಳೆಗೆ ಮಳೆಯ ಆತಂಕವಿಲ್ಲ ಆದರೆ ಬಿರುಗಾಳಿ ಬೀಸಿದರೆ ಕಾಯಿಗಳು ನೆಲಕ್ಕುದುರುತ್ತವೆ ಒಂದು ವೇಳೆ ಆಲಿಕಲ್ಲು ಮಳೆಯಾದರೆ ಪೀಚಿನಲ್ಲೇ ಕಾಯಿಗಳು ಹಾನಿಗೊಳಲಾಗುತ್ತವೆ ಎಂಬ ಆತಂಕವಿದೆ. ಇಲ್ಲವಾದರೆ ಬೇಸಿಗೆಯಲ್ಲಿ ಮಳೆ ಸುರಿದರೂ ಮಾವಿನ ಸಲಿಗೆ ದೊಡ್ಡಮಟ್ಟದ ಪೆಟ್ಟು ಬೀಳುವುದಿಲ್ಲ ಎಂಬುದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ. ಸಾಮಾನ್ಯವಾಗಿ ಮಾವು ಬೆಳೆ ಮಳೆಯಾಶ್ರಿತವಾಗಿರುವುದರಿಂದ ಅಂಥ ಸಮಸ್ಯೆ ಎದುರಾಗುವುದಿಲ್ಲ.ಮಾವು ಕಟಾವಿನ ವೇಳೆ ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಬೆಳೆಗಾರರು ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳೆಗಾರರಿಗೆ ಇಲಾಖೆ ಸಾಥ್:

ದ್ರಾಕ್ಷಿ ಅಥವಾ ಮಾವು ಬೆಳೆಗೆ ಬೆಂಗಳೂರಿನ ಲಾಲ್‌ಬಾಗ್, ಕಬ್ಬನ್‌ಪಾರ್ಕ್ ಹಾಗೂ ಇನ್ನಿತರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಜಿಲ್ಲಾ ಬೆಳೆಗಾರರಿಗೆ ಗ್ರಾಮಾಂತರ ಜಿಲ್ಲ ತೋಟಗಾರಿಕೆ ಇಲಾಖೆ ಸಾಥ್ ನೀಡಲಿದೆ. ರೈತರಿಂದ ನೇರವಾಗಿ ಬೆಳೆ ಮಾರಾಟ ಮಾಡಲು ಎಲ್ಲ ರೀತಿಯ ನೆರವು ನೀಡಲಿದೆ. ಬೆಳೆಗಾರರು ಆಯಾ ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಮನವಿ ಮಾಡಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಮೇಳ ನಡೆಸುವ ಚಿಂತನೆಯಿಲ್ಲ. ಆದ್ದರಿಂದ ಬೆಂಗಳೂರಿನಲ್ಲಿ ಆಯೋಜನೆಗೊಳ್ಳುವ ಮೇಳಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಮಾವು ಕೊಯ್ಲಿಗೆ ತೋಟಗಾರಿಕೆ ಇಲಾಖೆ ಟಿಪ್ಸ್ ಪ್ರಸ್ತುತ ಮೇ ತಿಂಗಳ ಪ್ರಾರಂಭದಿಂದ ಗ್ರಾಮಾಂತರ ಜಿಲ್ಲೆಯ ಮಾವು ಬೆಳೆಯುವ ಅನೇಕ ಪ್ರದೇಶಗಳಲ್ಲಿ ಅಲ್ಲಲ್ಲಿ ಸೀಮಿತಗೊಂಡಂತೆ ಬಿರುಗಾಳಿ, ಆಲಿಕಲ್ಲು ಸಮೇತ ಬಿರುಸು ಮಳೆ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಕಟಾವಿಗೆ ಸಿದ್ದವಾಗಿರುವ ಹಾಗೂ ಬಲಿಯುತ್ತಿರುವ ಮಾವಿನ ಸಲಿಗೆ ಹೆಚ್ಚಿನ ಹಾನಿ ಆಗುತ್ತಿರುವುದು ಸೇರಿ ವಾತಾವರಣದಲ್ಲಿ ತೇವಾಂಶ ಅಧಿಕಗೊಂಡು ಊಜಿನೊಣಗಳ ಹಾವಳಿ ಹೆಚ್ಚುವ ಸಾಧ್ಯತೆ ಇರುವುದರಿಂದ ಈ ಸನ್ನಿವೇಶದಲ್ಲಿ ಮಾವು ಬೆಳೆಗಾರರು ಫಸಲಿನ ರಕ್ಷಣೆಗೆ ಕೆಲವೊಂದು ಸೂಚನೆಗಳನ್ನು ಅನುಸರಿಸುವುದು ಅವಶ್ಯವಾಗಿದೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ತಿಳಿಸಿದೆ.

ಬಲಿತಿದ್ದರೆ ಕೂಯ್ಲು ಮಾಡಿ: ಮರದಲ್ಲಿ ಮಾವು ಬಲಿತ್ತಿದ್ದರೆ ಅವುಗಳನ್ನು ತಡಮಾಡದೇ ಕೊಯ್ಲು ಮಾಡುವುದು ಹೆಚ್ಚು ಸೂಕ್ತ ಹಣ್ಣಿನ ಊಜಿನೊಣಗಳನ್ನು ಹತೋಟಿಯಲ್ಲಿಡಲು ಎಕರೆಗೆ ಕನಿಷ್ಠ 8-10 ಮೋಹಕ ಬಲೆ ಕಟ್ಟುವುದು, ಹಣ್ಣಿನ ಊಜಿನೊಣ ನಾಶಪಡಿಸಲು ಮರಗಳಿಗೆ ಕೀಟನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ 1.0 ಮಿ.ಲಿ. ಪ್ರಮಾಣದಲ್ಲಿ ಬೆರಸಿ ಸಿಂಪಡಿಸುವುದು. 10 ದಿನಗಳ ನಂತರ (ಕೊಯ್ಲು ಮುಂಚಿತವಾಗಿ ಕನಿಷ್ಠ 10-15 ದಿನಗಳ ಮೊದಲು) ಈ ಕ್ರಮ ಪುನರಾವರ್ತನೆ ಮಾಡಬೇಕು, ತೋಟದಲ್ಲಿ ಈಗಾಗಲೇ ಊಜಿನೊಣಗಳ ಹಾವಳಿಗೆ ನೆಲಕ್ಕೆ ಬಿದ್ದಿರುವ ಹಣ್ಣುಗಳನ್ನು ತಡಮಾಡದೇ ಸಂಗ್ರಹಿಸಿ 1 ಅಡಿ ಆಳದ ಗುಣಿ ತೋಡಿ ಮಣ್ಣು ಮುಚ್ಚುವುದರಿಂದ ಆ ಹಣ್ಣುಗಳ ಒಳಗೆ ಬೆಳೆಯುತ್ತಿರುವ ಊಜಿನೊಣದ ಕೋಶಗಳನ್ನು ನಾಶಪಡಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಬೇಸಿಗೆ ಮಳೆಯಿಂದ ಮಾವು ಬೆಳೆಗೆ ಆತಂಕವಿಲ್ಲ ಆದರೆ ಬಿರುಗಾಳಿ ಅಥವಾ ಆಲಿಕಲ್ಲು ಮಳೆ ಬಿದ್ದರೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇದರ ಹೊರತಾಗಿ ಪ್ರಸ್ತುತ ಮಳೆ ಮುಂದುವರೆದರೆ ದ್ರಾಕ್ಷಿ ಬೆಳೆಗೆ ಹೆಚ್ಚು ಹಾನಿಯಾಗುವ ಸಾಧ್ಯತೆ ಇದೆ. ತೋಟದಲ್ಲಿ ಸಲನ್ನು ರಕ್ಷಿಸಲು ಇಲಾಖೆ ನೀಡಿರುವ ಸೂಚನೆ ಪಾಲಿಸಬೇಕು, ಹೆಚ್ಚಿನ ಮಾಹಿತಿಗೆ ಆಯಾ ತಾಲೂಕುಗಳ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು.

ಗುಣವಂತ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net