ಮಳೆಗೆ ದೇವನಹಳ್ಳಿ ಬೈಪಾಸ್ ಮುಳುಗಡೆ!

rain
ದೇವನಹಳ್ಳಿ ಬೈಪಾಸ್‌ನಲ್ಲಿನ ಮಳೆ ನೀರಿನ ಅವಾಂತರದ ದೃಶ್ಯ
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ:
ದೇವನಹಳ್ಳಿ ಸುತ್ತಮುತ್ತ ಸುರಿದ ಭಾರಿ ಮಳೆಗೆ ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ಮಳೆ ನೀರಿನಲ್ಲಿ ಮುಳುಗಡೆಯಾಗಿದ್ದು, ಕಾರು, ದ್ವಿಚಕ್ರವಾಹನಗಳು ನೀರಿನಲ್ಲಿ ತೇಲಿ ಹೋಗಿವೆ..!
ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ದೇವನಹಳ್ಳಿ ಬೈಪಾಸ್‌ನಲ್ಲಿನ ಮಳೆ ನೀರಿನ ಅವಾಂತರದ ದೃಶ್ಯ ವೈರಲ್ ಆಗಿದೆ. ಹೆದ್ದಾರಿ ನಿರ್ಮಾಣದ ವೇಳೆ ವೈಜ್ಞಾನಿಕವಾಗಿ ಮಳೆ ನೀರು ಹರಿಯಲು ಚರಂಡಿ ನಿರ್ಮಾಣ ಮಾಡದಿರುವುದು ಇಂಥ ಅವ್ಯವಸ್ಥೆಗೆ ಕಾರಣವಾಗಿದೆ ಎಂದು ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 20ಕ್ಕೂ ಹೆಚ್ಚು ದ್ವಿಚಕ್ರವಾಹನಗಳಿಗೆ ಹಾನಿಯಾಗಿವೆ, ನಾಲ್ಕೈದು ಕಾರು ಹಾಗೂ ಆಟೋಗಳು ನೀರಿನಲ್ಲಿ ಮುಳುಗಡೆಯಾಗಿ ರಿಪೇರಿಗೆ ಬಂದಿವೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ದಂಡ ತೆರಬೇಕಾಗಿದೆ ಎಂಬ ಆಕ್ರೋಶದ ನುಡಿಗಳು ಜಾಲತಾಣಗಳಲ್ಲಿ ವ್ಯಕ್ತವಾಗಿದೆ.
ಇದು ಹಳೇ ವಿಡಿಯೋ: ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇದು ದೇವನಹಳ್ಳಿಯೋ ಸಮುದ್ರತೀರವೋ ಎಂದು ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದರು. ಸಾರ್ವಜನಿಕರ ತೆರಿಗೆ ಹಣ ಲೂಟಿ ಎಂದು ಹಲವರು ಪ್ರತಿಕ್ರಿಯಿಸಿದ್ದರು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ದೇವನಹಳ್ಳಿ ಪುರಸಭೆ ಅಧಿಕಾರಿಗಳು ಇದು ಹಳೇ ವಿಡಿಯೋ. ಕಳೆದೆರಡು ವರ್ಷದ ಹಿಂದಿನದ್ದು ಎಂದು ಪ್ರತಿಕ್ರಿಯಿಸಿದ್ದಾರೆ. ಹೆದ್ದಾರಿ ನಿರ್ಮಾಣದ ವೇಳೆ ಮಳೆ ನೀರು ಸರಾಗವಾಗಿ ಹರಿಯಲು ವೈಜ್ಞಾನಿಕವಾಗಿ ಚರಂಡಿ ನಿರ್ಮಾಣವಾಗಿರಲಿಲ್ಲ, ಜತೆಗೆ ಚರಂಡಿಗಳಲ್ಲಿ ಕಸಕಡ್ಡಿ ಮಣ್ಣು ಶೇಕರಣೆಯಾಗಿದ್ದರಿಂದ ಮಳೆ ನೀರು ಹರಿಯದೆ ರಸ್ತೆಯಲ್ಲಿ ನಿಂತು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಪ್ರಸ್ತುತ ಈ ಸನ್ನಿವೇಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವನಹಳ್ಳಿ ಬೈಪಾಸ್‌ನಲ್ಲಿ ಪ್ರವಾಹ ಮಾದರಿಯ ವಿಡಿಯೋ ಹರಿದಾಡುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ. ಇದು ಹಳೇಯ ವಿಡಿಯೋ ದೃಶ್ಯವಾಗಿದೆ. ಪ್ರಸ್ತುತ ಇಂಥ ಸನ್ನಿವೇಶ ಇಲ್ಲ. ಕಳೆದ ಬಾರಿಯೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ವೈಜ್ಞಾನಿಕವಾಗಿ ಚರಂಡಿ ವಿನ್ಯಾಸ ಬದಲಿಸಿ ಕ್ರಮ ಕೈಗೊಂಡಿದ್ದಾರೆ ಇದರಿಂದ ಎಷ್ಟೇ ಪ್ರಮಾಣದ ಮಳೆ ಬಂದರೂ ರಸ್ತೆಯಲ್ಲಿ ನೀರು ನಿಲ್ಲುವುದಿಲ್ಲ.
ದೊಡ್ಡಮಲವಯ್ಯ, ಪುರಸಭೆ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net