ಮಳೆಗೆ ರಾಷ್ಟ್ರೀಯ ಹೆದ್ದಾರಿ ಅಯೋಮಯ

kota.me.22 hedddari avanthra-1
Published on

ಕೋಟ: ಇಲ್ಲಿನ ಕೋಟ, ಮಣೂರು, ಸಾಲಿಗ್ರಾಮ ಸಾಸ್ತಾನ ಸೇರಿದಂತೆ ವಿವಿಧ ಭಾಗಗಳ ರಾಷ್ಟ್ರೀಯ ಹೆದ್ದಾರಿ ಫುಟ್‌ಪಾತ್ ಸ್ಥಿತಿ ಅಯೋಮಯವಾಗಿದೆ. ಹೆದ್ದಾರಿ ಎರಡು ದಿಕ್ಕುಗಳು ರಾಡಿ ಮಯವಾಗಿದೆ. ಜನರಿಗೆ ಸಂಚರಿಸಲಾಗದ ಸ್ಥಿತಿ ಉಂಟಾಗಿದೆ.

ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಗೈಯುತ್ತಿರುವ ಕೆ.ಕೆ.ಆರ್.ಕಂಪನಿ ಇತ್ತೀಚೆಗೆ ಹೊಂಡಗುಂಡಿಗಳಿದ್ದ ರಾಷ್ಟ್ರೀಯ ಹೆದ್ದಾರಿಗೆ ಮರು ಡಾಂಬರೀಕರಣಗೊಳಿಸಿದ್ದು, ರಸ್ತೆಯ ಎರಡು ದಿಕ್ಕುಗಳಿಗೆ ಕೆಂಪು ಮಣ್ಣು ಹಾಕಿಸಿ ಜನಸಾಮಾನ್ಯರಿಗೆ ಯೋಗ್ಯ ವಾತಾವರಣ ನಿರ್ಮಿಸಿದರೂ ಮಳೆಗೆ ರಸ್ತೆಯ ಎರಡು ದಿಕ್ಕುಗಳು ರಾಡಿ ಎಬ್ಬಿಸಿದೆ. ಇದರಿಂದ ಜನಸಾಮಾನ್ಯರು ಸೇರಿದಂತೆ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

ಈ ಹಿಂದೆ ಹೆದ್ದಾರಿ ನಿರ್ವಹಣೆ ನವಯುಗ ಕಂಪನಿ ಕರಾರುವಕ್ಕಾಗಿ ನಿರ್ವಹಣೆಗೈಯುತ್ತಿತ್ತು. ಇದೀಗ ಮುನ್ನಡೆಸುತ್ತಿರುವ ಕೆ.ಕೆ.ಆರ್. ಕಂಪನಿ ಹಳೆಯ ಡಾಂಬರು ಇತರರಿಗೆ ಮಾರಾಟಗೊಳಿಸಿ ರಸ್ತೆ ಅಕ್ಕಪಕ್ಕ ಮಣ್ಣು ಹಾಕಿ ಕೆಸರುಮಯವಾಗಿದೆ. ಇದರಿಂದ ವಾಹನ, ಪಾದಚಾರಿಗಳಿಗೆ ಸಂಚಕಾರ ತಂದಿರಿಸಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಸಾಸ್ತಾನದ ಹೆಚ್ಚಿನ ಭಾಗಗಳಲ್ಲಿ ರಸ್ತೆ ಫುಟ್ ಪಾತ್‌ನಲ್ಲಿ ಮಣ್ಣು ರಾಶಿ ಹಾಕಿಸಿ ನೆಲಸಮಗೊಳಿಸದ ಬಗ್ಗೆ ಸಾರ್ವಜನಿಕರು ಮಾಧ್ಯಮದ ಮುಂದೆ ಅಳಲು ತೊಡಿಕೊಂಡಿದ್ದಾರೆ.

ರಸ್ತೆ ಅಕ್ಕಪಕ್ಕ ಸರಿ ಪಡಿಸಿ ಆಗ್ರಹ

ಕುಂದಾಪುರದಿಂದ ಪ್ರಸ್ತುತ ಇಲ್ಲಿನ ಸಾಸ್ತಾನದ ಮಾಬುಕಳದವರೆಗೆ ಹಾಕಲಾದ ಕೆಂಪು ಮಣ್ಣು ತೆಗೆಸಿ ಕ್ರಶರ್ ಹುಡಿ ಹಾಕಿ ಜನಸಾಮಾನ್ಯರಿಗೆ ಅನುಕೂಲಕರ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ವಾಹನ ಸವಾರರು, ಜನಸಾಮಾನ್ಯರು, ಹೆದ್ದಾರಿ ಜಾಗೃತಿ ಸಮಿತಿ ಆಗ್ರಹಿಸಿದೆ.

ಹಳೆಯ ಡಾಂಬರು ಮಾರಾಟಗೊಳಿಸುವ ಅಗತ್ಯತೆ ಇತ್ತೆ?

ಹೆಜಮಾಡಿಯಿಂದ ಕುಂದಾಪುರದವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಗೈಯುತ್ತಿರುವ ಪ್ರಸ್ತುತ ಕೆ.ಕೆ.ಆರ್. ಕಂಪನಿಯ ನಿರ್ಲಕ್ಷ್ಯದಿಂದ ಒಂದು ವರ್ಷದಿಂದ ರಸ್ತೆ ಅಯೋಮಯ ಸ್ಥಿತಿಗೆ ತಲುಪಿ ಹೊಂಡ ಗುಂಡಿಗಳಿಂದ ವಾಹನ ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದೆ. ಾಷ್ಟ್ರೀಯ ಹೆದ್ದಾರಿ ಸಮಿತಿ ಸತತ ಪ್ರತಿಭಟನೆಯಿಂದ ರಸ್ತೆ ಮರು ಡಾಂಬರೀಕರಣಕ್ಕೆ ಮುಂದಾಗಿದೆ. ಆದರೆ ಹಳೆಯ ಡಾಂಬರ್ ರಸ್ತೆಯ ಎರಡು ದಿಕ್ಕುಗಳಿಗೆ ಹಾಕುವುದನ್ನು ಬಿಟ್ಟು ಮಾರಾಟ ಮಾಡಿ ಫುಟ್‌ಪಾತ್ ಪ್ರದೇಶಕ್ಕೆ ರಾಡಿ ಎಬ್ಬಿಸುವ ಕೆಂಪು ಮಣ್ಣು ಹಾಕಿ ಸಂಕಷ್ಟಕ್ಕೀಡು ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

ಮಣೂರು ಇಂದ್ರಪ್ರಸ್ಥ ಹೋಟೆಲ್ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆಯ ಡಾಂಬರೀಕರಣ ಸಂದರ್ಭದಲ್ಲಿ ರಸ್ತೆಯ ಹಳೆಯ ಡಾಂಬರನ್ನು ತೆಗೆದು ಕೆಕೆಆರ್ ಕಂಪನಿ ಮಾರಾಟ ಮಾಡಿದ್ದು, ರಸ್ತೆ ಬದಿಯಲ್ಲಿ ಕೆಂಪು ಮಣ್ಣು ಹಾಕಿದ್ದಾರೆ. ಮಳೆಗಾಲದ ಸಮಯದಲ್ಲಿ ವಾಹನಗಳ ಓಡಾಟದಿಂದಾಗಿ ರಸ್ತೆ ಬದಿಯಲ್ಲಿನ ಕೆಂಪು ಮಣ್ಣಿನ ರಾಡಿ ಎದ್ದು ಸಾರ್ವಜನಿಕರು, ವಾಹನ ಸವಾರರಿಗೆ ಸಂಚರಿಸಲು ಸಮಸ್ಯೆಯಾಗಿದೆ. ಇದನ್ನು ಶೀಘ್ರದಲ್ಲಿ ಸರಿಪಡಿಸಲು ಆಗ್ರಹಿಸುತ್ತಿದ್ದೇನೆ. -ರಾಜೇಶ ಕಂಬಳಗದ್ದೆ ಮಣೂರು https://www.vijayavani.net/a-good-goal-through-self-effort https://www.vijayavani.net/the-contribution-of-ganiga-samaja-to-the-field-of-yakshagana-is-immense

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net