ಮಂಗಳೂರು ನಗರದಲ್ಲಿ ಮಳೆ ಅವಾಂತರ - ಅರೆ ಬರೆ ಕಾಮಗಾರಿ ಕಿರಿಕಿರಿ - ಸಾರ್ವಜನಿಕರ ಪರದಾಟ

Mng-may20-kenjar road
Published on

ಮಂಗಳೂರು: ದಟ್ಟ ಮೋಡ ಕವಿದು ಸೋಮವಾರ ಬೆಳಗ್ಗಿನಿಂದಲೇ ಸುರಿದ ನಿರಂತರ ಪೂರ್ವ ಮುಂಗಾರು ನಗರದಲ್ಲಿ ಹಲವು ಅವಾಂತರಗಳನ್ನು ಉಂಟು ಮಾಡಿತು.

ನಗರದಲ್ಲಿ ಅರ್ಧಂಬರ್ಧ ಕಾಮಗಾರಿಗಳಿಂದ ನೀರು ನಿಂತು ಜನ ಪರದಾಡಿದರು. ಚರಂಡಿಗಳ ಹೂಳೆತ್ತುವ ಕಾಮಗಾರಿ ಪೂರ್ಣಗೊಳ್ಳದೆ ರಸ್ತೆಯಲ್ಲೇ ಮಳೆ ನೀರು ಹರಿದು ನಗರದ ಹಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಪಾದಚಾರಿಗಳು ನಡೆದಾಡಲು ಹರ ಸಾಹಸ ಪಟ್ಟರು. ರಸ್ತೆಗಳಲ್ಲಿನ ಹೊಂಡಗಳಲ್ಲಿ ನೀರು ನಿಂತು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡರು.

ಕೊಡಿಯಾಲಗುತ್ತುನಲ್ಲಿ ತಡೆಗೋಡೆ ಕುಸಿದು ಬಿದ್ದಿದೆ. ನೆಲಕ್ಕೆ ಅಳವಡಿಸಲಾಗಿದ್ದ ಇಂಟರ್‌ಲಾಕ್‌ಗೆ ಹಾನಿ ಸಂಭವಿಸಿದೆ. ಇದರ ಪಕ್ಕದಲ್ಲೇ ಬೃಹತ್ ಕಟ್ಟಡವೊಂದರ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಲಾಲ್‌ಭಾಗ್‌ನಲ್ಲಿ ಬುಡದ ಮಣ್ಣು ಸಡಿಲಗೊಂಡು ಬೃಹತ್ ಮರವೊಂದು ಧರಾಶಾಹಿಯಾಗಿದೆ. ಈ ಸಂದರ್ಭ ಇಲ್ಲಿ ವಾಹನಗಳು ಹಾಗೂ ಸಾರ್ವಜನಿಕರು ಇಲ್ಲದ ಕಾರಣ ಯಾವುದೇ ಅಪಾಯ ಉಂಟಾಗಿಲ್ಲ.

ಕದ್ರಿ ಪಾರ್ಕ್ ಮುಂಭಾಗದಲ್ಲಿ ಒಣಗಿದ್ದ ಮರವೊಂದು ರಸ್ತೆಗೆ ಉರುಳಿದೆ. ವಾಹನ ಸಂಚಾರ ಜನರ ಓಡಾಟವಿಲ್ಲದ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಕೆಲ ಸಮಯ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಸ್ಥಳಕ್ಕಾಗಮಿಸಿದ ಕದ್ರಿ ಅಗ್ನಿ ಶಾಮಕ ದಳ ಸಿಬಂದಿಗಳು ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಕೆಪಿಟಿ ಎಸ್‌ಕೆಎಸ್ ಬಳಿ ಮರದ ಕೊಂಬೆ ಬಿದ್ದಿದ್ದು, ಅಗ್ನಿ ಶಾಮಕ ಸಿಬಂದಿಗಳು ತೆರವುಗೊಳಿಸಿದ್ದಾರೆ. ಮುಂಜಾನೆಯಿಂದಲೇ ಮಳೆ ಸುರಿದ ಕಾರಣ ಬೆಳಗ್ಗೆ ಕೆಲಸಕ್ಕೆ ತೆರಳುವವರಿಗೆ ಸಮಸ್ಯೆಯಾಯಿತು.

ಮುಳುಗಡೆ ಭೀತಿ: ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾದ ಮಾದರಿಯಲ್ಲಿ ಮಂಗಳೂರು ನಗರದಲ್ಲೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುವ ಭೀತಿ ಎದುರಾಗಿದೆ. ನಗರದ ಬಹುತೇಕ ಕಡೆ ರಸ್ತೆ ಬದಿ ಅಗೆದು ಪೈಪ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು ಕೆಲವು ಕಡೆ ರಸ್ತೆ ಅಗೆದು ಹಾಕಲಾಗಿದೆ. ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಸಮರ್ಪಕವಾಗಿ ಚರಂಡಿ ಹೂಳೆತ್ತುವ ಕೆಲಸ ಆಗಿಲ್ಲ. ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಗಳಲ್ಲೇ ಸಂಗ್ರಹಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಎರಡು-ಮೂರು ತಾಸು ಉತ್ತಮ ಮಳೆಯಾದರೆ ಅಂಗಡಿ, ಮನೆಗಳಿಗೆ ನೀರು ನುಗ್ಗುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net