

ಮಂಜುನಾಥ ತಿಮ್ಮಯ್ಯ ಮೈಸೂರು
ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಗುಡುಗು, ಸಿಡಿಲು, ಬಿರುಗಾಳಿಯೊಂದಿಗೆ ಆಲಿಕಲ್ಲು ಸಹಿತ ಸುರಿದ ಧಾರಾಕಾರ ಮಳೆಗೆ ವಿವಿಧೆಡೆ ಅವಾಂತರ ಸೃಷ್ಟಿಯಾಗಿದ್ದು, ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಮೈಸೂರಿನ ಅರ್ಧದಷ್ಟು ಬಡಾವಣೆ ನಿವಾಸಿಗಳು ವಿದ್ಯುತ್ ಪೂರೈಕೆಯಿಲ್ಲದೆ ಕತ್ತಲಿನಲ್ಲೇ ಇಡೀ ರಾತ್ರಿ ಕಳೆದಿದ್ದಾರೆ.
ಊರಿ ಬಿಸಿಲಿನಿಂದ ಕಂಗೆಟ್ಟಿದ್ದ ಮೈಸೂರಿನಲ್ಲಿ ಶುಕ್ರವಾರ ಸಂಜೆ ಬರೋಬ್ಬರಿ 40 ಮಿಲಿ ಮೀಟರ್‌ನಷ್ಟು ಮಳೆ ಸುರಿದಿದೆ. ಜಯಪುರ, ಕಸಬಾ, ಇಲವಾಲ ಹೋಬಳಿಯಲ್ಲೂ ಇಷ್ಟೇ ಪ್ರಮಾಣದಲ್ಲಿ ಮಳೆ ದಾಖಲಾಗಿದೆ. ಹೆಚ್ಚಿನ ಹಾನಿ ಮೈಸೂರು ನಗರ ಭಾಗದಲ್ಲಿ ಉಂಟಾಗಿದೆ.
ವರುಣನ ಅಬ್ಬರಕ್ಕೆ ನಗರದಲ್ಲಿ ಅವ್ಯವಸ್ಥೆಯೇ ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. 150 ಮರಗಳು, 177 ವಿದ್ಯುತ್ ಕಂಬಗಳು ನೆಲಕ್ಕರುಳಿವೆ. ಮರಗಳು ಬಿದ್ದು ಕಾರ್, ಬೈಕ್‌ಗಳಿಗೂ ಹಾನಿಯಾಗಿದೆ.
ಜಿಲ್ಲಾದ್ಯಂತ ಹೆಚ್ಚಿನ ಹಾನಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಆಸ್ತಿಗಳಿಗೆ (ಸೆಸ್ಕ್) ಉಂಟಾಗಿದೆ. 72.33 ಲಕ್ಷ ರೂ. ನಷ್ಟವಾಗಿದೆ. ಹಾನಿಯ ಅಂದಾಜು ಲೆಕ್ಕಾಚಾರ ಪ್ರಗತಿಯಲ್ಲಿದ್ದು, ಹಾನಿ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜತೆಗೆ, ಎಸ್‌ಡಿಆರ್‌ಎಫ್ ಅಡಿ 43.35 ಲಕ್ಷ ರೂ. ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೆಸ್ಕ್ ಸಿದ್ಧತೆ ನಡೆಸಿದೆ.
ಜಿಲ್ಲೆಯಲ್ಲಿ ಮೈಸೂರು ನಗರದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಸೆಸ್ಕ್‌ಗೆ ನಷ್ಟ ಉಂಟಾಗಿದೆ. ಮೈಸೂರು ತಾಲೂಕಿನಲ್ಲಿ 117 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಇದರಿಂದ 19.94 ಲಕ್ಷ ರೂ. ನಷ್ಟವಾಗಿದೆ. ಉಳಿದಂತೆ ನಂಜನಗೂಡು ತಾಲೂಕಿನಲ್ಲಿ 10, ತಿ.ನರಸೀಪುರ ತಾಲೂಕಿನಲ್ಲಿ 81, ಹುಣಸೂರಿನಲ್ಲಿ 31, ಎಚ್.ಡಿ.ಕೋಟೆ ತಾಲೂಕಿನಲ್ಲಿ 38, ಸರಗೂರು ತಾಲೂಕಿನಲ್ಲಿ 36, ಕೆ.ಆರ್.ನಗರ ತಾಲೂಕಿನಲ್ಲಿ 4, ಪಿರಿಯಾಪಟ್ಟಣ ತಾಲೂಕಿನಲ್ಲಿ 32 ವಿದ್ಯುತ್ ಕಂಬಗಳಿಗೆ ಹಾನಿಯಾಗಿ ಜಿಲ್ಲಾದ್ಯಂತ 48.98 ಲಕ್ಷ ರೂ. ನಷ್ಟವಾಗಿದೆ.
ಇದರೊಂದಿಗೆ ವಿದ್ಯುತ್ ಪರಿವರ್ತಕ(ಟಿಸಿ) ಯಂತ್ರಗಳೂ ಹಾಳಾಗಿವೆ. ಜಿಲ್ಲಾದ್ಯಂತ 16 ಟಿಸಿಗಳು ಸುಟ್ಟು ಹೋಗಿವೆ. ಇದರಿಂದಾಗಿ 18.17 ಲಕ್ಷ ರೂ. ನಷ್ಟವಾಗಿದೆ. ಈ ಪೈಕಿ ಮೈಸೂರು ತಾಲೂಕಿನಲ್ಲೇ 9 ಟಿಸಿಗಳು ಹಾಳಾಗುವ ಮೂಲಕ 6.26 ಲಕ್ಷ ರೂ. ನಷ್ಟವಾಗಿದೆ. ಉಳಿದಂತೆ ತಿ.ನರಸೀಪುರದಲ್ಲಿ 3, ಹುಣಸೂರು, ಎಚ್.ಡಿ.ಕೋಟೆಯಲ್ಲಿ ತಲಾ 2 ಟಿಸಿಗಳು ಕೈಕೊಟ್ಟಿವೆ.16 ಟಿಸಿಗಳು ಸುಟ್ಟು
ವಿದ್ಯುತ್ ಕಂಬಗಳು, ಮರಗಳು ಉರುಳಿಬಿದ್ದಿರುವುದರಿಂದ ಮೈಸೂರು ನಗರದಲ್ಲೇ 13.80 ಕಿಲೋ ಮೀಟರ್‌ನಷ್ಟು ವಿದ್ಯುತ್ ತಂತಿ ಹಾಳಾಗಿ ಹೋಗಿದೆ. ಇದರಿಂದ 5.19 ಲಕ್ಷ ರೂ. ನಷ್ಟವಾಗಿದೆ. ಜಿಲ್ಲೆಯ ಉಳಿದ ಕಡೆ ವಿದ್ಯುತ್ ತಂತಿ ಹಾಳಾಗಿರುವ ಕುರಿತು ವರದಿಯಾಗಿಲ್ಲ.
ನಗರದ ಪ್ರತಿ ಬಡಾವಣೆಯಲ್ಲೂ ಮರಗಳು ಉರುಳಿ ಬಿದ್ದಿವೆ. ಹಳೇ ಬಡಾವಣೆ, ನಗರದ ಮಧ್ಯಭಾಗದಲ್ಲೇ ಹೆಚ್ಚಿನ ಮರಗಳು ಧರೆಗುರುಳಿವೆ. ಇವುಗಳ ಸಂಖ್ಯೆ 150 ದಾಟಲಿದೆ. ಸಂಸ್ಕೃತ ಪಾಠಶಾಲೆ. ಕಾಳಿದಾಸ ರಸ್ತೆ, ಶೇಷಾದ್ರಿ ಐಯ್ಯರ್ ರಸ್ತೆ, ವಿವೇಕಾನಂದ ವೃತ್ತ, ಜಯನಗರ, ಕುವೆಂಪುನಗರ, ಸರಸ್ವತಿಪುರಂ, ಜಯಲಕ್ಷ್ಮೀಪುರ, ವಿದ್ಯಾರಣ್ಯಪುರಂ ಹೀಗೆ ಪ್ರತಿ ಕಡೆಯೂ ಮರಗಳಿಗೆ ಹಾನಿಯಾಗಿದ್ದು, ಬೃಹತ್ ಮರಗಳು ರಸ್ತೆಯಲ್ಲಿ ಬಿದ್ದಿರುವುದರಿಂದ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದೆ. ಶನಿವಾರ ಸಂಜೆವರೆಗೂ ರಸ್ತೆಯಲ್ಲಿ ಬಿದ್ದಿರುವ ಮರದ ಕೊಂಬೆಗಳ ತೆರವು ಕಾರ್ಯ ನಡೆಯಿತು.
ಪಾಲಿಕೆ ‘ಅಭಯ್’ ತಂಡವು ಮರದ ಅವಶೇಷಗಳು ತೆರವು ಕಾರ್ಯಾಚರಣೆಯನ್ನು ತ್ವರಿತಗತಿಯಲ್ಲಿ ನಡೆಸಿತು. ಚಾಮರಾಜ, ಕೃಷ್ಣರಾಜ, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ತಲಾ ಮೂರು ತಂಡಗಳು(ತಂಡವೊಂದರಲ್ಲಿ 6 ಸಿಬ್ಬಂದಿ) ಹಗಲು-ರಾತ್ರಿ ಕೆಲಸ ಮಾಡಿ ಮರಗಳನ್ನು ತೆರವುಗೊಳಿಸಿದವು. ಇದರೊಂದಿಗೆ ಪಾಲಿಕೆ ಇತರ ಸಿಬ್ಬಂದಿಯನ್ನೂ ಬಳಕೆ ಮಾಡಿಕೊಳ್ಳಲಾಗಿದೆ. ಕೆಲವೆಡೆ ಜೆಸಿಬಿ ಯಂತ್ರವನ್ನು ಬಳಸಿಕೊಳ್ಳಲಾಯಿತು.
ನಗರದ ಅರ್ಧದಷ್ಟು ಬಡಾವಣೆಗಳಿಗೆ ರಾತ್ರಿಯಿಡೀ ಕಗ್ಗತ್ತಲು ಆವರಿಸಿಕೊಂಡಿತು. ಮಳೆಯಿಂದ ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ಕೆಲವು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಕತ್ತಲಿನಲ್ಲೇ ಜನರು ರಾತ್ರಿ ಕಳೆದಿದ್ದಾರೆ. ಪ್ಯಾನ್ ಚಲಿಸದ ಕಾರಣಕ್ಕೆ ಉರಿ ಸೆಖೆಯೊಂದಿಗೆ ಸೊಳ್ಳೆ ಕಾಟವೂ ಸೇರಿಕೊಂಡು ನಿದ್ದೆ ಬಾರದೆ ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು ಎಂದು ಜನರು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.
ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಕಾರಣಕ್ಕೆ ಮೊಬೈಲ್‌ಗಳಲ್ಲಿ ಚಾರ್ಜ್ ಖಾಲಿಯಾಗಿ ಸ್ತಬ್ಧಗೊಂಡಿದ್ದವು. ಬ್ಯಾಂಕ್‌ಗಳ ಕೆಲವು ಎಟಿಎಂಗಳು ಸ್ಥಗಿತಗೊಂಡಿದ್ದವು. ನೀರು ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದ್ದು, ನೀರಿಲ್ಲದ ಕಾರಣಕ್ಕೆ ಮನೆ ಜನರು ಪರದಾಡಿದರು. ಕೆಲವರು ಬೆಳಗ್ಗೆ ಸ್ನಾನ ಮಾಡಲು ಸಹ ನೀರು ಇರಲಿಲ್ಲ. ನೈಸರ್ಗಿಕ ಕ್ರಿಯೆ ಪೂರೈಸಲು ಸಹ ತೊಡಕು ಉಂಟಾಗಿತ್ತು.
ಹೋಟೆಲ್‌ಗಳಿಗೂ ಬಿಸಿತಟ್ಟಿತ್ತು. ಕೆಲವು ಕಡೆ ನೀರಿನ ಅಭಾವ ಉಂಟಾಗಿತ್ತು. ವಿದ್ಯುತ್ ಇಲ್ಲದ ಕಾರಣಕ್ಕೆ ಯಂತ್ರ ಸ್ತಬ್ಧಗೊಂಡಿದ್ದರಿಂದ ಊಟ, ಉಪಾಹಾರ ತಯಾರಿಸಲು ಅಡ್ಡಿ ಉಂಟಾಯಿತು. ಹೀಗಾಗಿ, ಕೆಲವು ಕಡೆ ಇಡ್ಲಿ, ಚಟ್ನಿ ಸೇರಿದಂತೆ ಇನ್ನಿತರ ಉಪಾಹಾರವನ್ನು ಮಾಡಿರಲಿಲ್ಲ. ಯಂತ್ರ ಸಹಾಯವಿಲ್ಲದೆ ಮಾಡುವ ತಿಂಡಿಗಳನ್ನು ಮಾತ್ರ ತಯಾರಿಸಿ ಗ್ರಾಹಕರಿಗೆ ನೀಡಲಾಯಿತು.
ಸೆಸ್ಕ್ ಸಿಬ್ಬಂದಿ ಹಾಳಾಗಿರುವ ವಿದ್ಯುತ್ ತಂತಿಗಳ ದುರಸ್ತಿಗಾಗಿ ಹಗಲಿರುಳು ಶ್ರಮಿಸಿದರು. ಇದರಿಂದಾಗಿ ಶನಿವಾರ ಸಂಜೆ ಹೊತ್ತಿಗೆ ಬಹುತೇಕ ಕಡೆ ವಿದ್ಯುತ್ ಸರಬರಾಜು ಮರುಚಾಲನೆಗೊಂಡಿತು. ಇದರಿಂದ ಜನರು ನಿಟ್ಟುಸಿರು ಬಿಟ್ಟರು. ಬಳಿಕ ನಗರದಲ್ಲಿ ಸಹಜ ಸ್ಥಿತಿ ನಿರ್ಮಾಣವಾಯಿತು.
ರೇಷ್ಮೆ ಕಾರ್ಖಾನೆ ಎದುರು, ಧನ್ವಂತರಿ ರಸ್ತೆ, ರಾಮಸ್ವಾಮಿ ವೃತ್ತದಿಂದ ನ್ಯಾಯಾಲಯದ ಕಡೆಗೆ ಹೋಗುವ ಮಾರ್ಗ, ವಾಣಿವಿಲಾಸ ರಸ್ತೆ, ಚಾಮುಂಡಿಪುರಂನ ಜೆಎಲ್‌ಬಿ ರಸ್ತೆ, ಮಹಾರಾಜ ಕಾಲೇಜಿನಿಂದ ಸರಸ್ವತಿಪುರಂನ ಮಾರ್ಗ, ಮಹಾರಾಜ ಹಾಸ್ಟೆಲ್ ಮುಂಭಾಗ, ಈಜುಕೊಳದ ರಸ್ತೆ, ಗಂಗೋತ್ರಿ ಬಡಾವಣೆ, ಸರಸ್ವತಿಪುರಂ, ಕೆ.ಜಿ.ಕೊಪ್ಪಲು, ಅಕ್ಷಯಭಂಡಾರ್, ಕುವೆಂಪುನಗರ, ರಾಮಕೃಷ್ಣನಗರ, ಸಿದ್ಧಾರ್ಥನಗರ, ಮಾರುತಿ ದೇವಸ್ಥಾನದ ರಸ್ತೆ, ದಾಸಪ್ಪ ವೃತ್ತದಿಂದ ಆಕಾಶವಾಣಿವರೆಗಿನ ಕೆ.ಆರ್.ಎಸ್. ರಸ್ತೆ…ಹೀಗೆ ಪ್ರತಿ ರಸ್ತೆಯಲ್ಲೂ ಮರಗಳು ಬಿದ್ದಿದ್ದವು. ನಗರವನ್ನು ಒಂದು ಸುತ್ತು ಹಾಕಿದರೆ ಮರಗಳು ಬಿದ್ದಿರುವ ಅವಶೇಷಗಳೇ ಗೋಚರವಾಗುತ್ತಿದ್ದವು.
ಮಳೆಯಿಂದ ಜಿಲ್ಲೆಯಲ್ಲಿ ಮೈಸೂರು ನಗರದಲ್ಲೇ ಹೆಚ್ಚಿನ ಹಾನಿಯಾಗಿದೆ. ವಿದ್ಯುತ್ ಕಂಬ, ತಂತಿಗಳು ಬಿದ್ದಿವೆ. ಅವುಗಳ ದುರಸ್ತಿ, ತೆರವು ಕಾರ್ಯಾಚರಣೆ ನಡೆದಿದೆ. ಹಾನಿ ಲೆಕ್ಕಾಚಾರ ಪ್ರಗತಿಯಲ್ಲಿದೆ.ಶೀಲಾ, ವ್ಯವಸ್ಥಾಪಕ ನಿರ್ದೇಶಕಿಸೆಸ್ಕ್