

ಬೆಂಗಳೂರು:ರಾಜ್ಯದಲ್ಲಿ ಮುಂಗಾರು ಮುಗಿಯಲು 22 ದಿನ ಬಾಕಿ ಇರುವಾಗ ಪ್ರಸಕ್ತ ತಿಂಗಳಲ್ಲಿ ಘಟ್ಟಪ್ರದೇಶಗಳಲ್ಲಿ ಮಳೆ ಕುಂಠಿತವಾದರೆ, ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆ ಅಥವಾ ವಾಡಿಕೆಗಿಂತ ಅಧಿಕವಾಗಿ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ( ಐಎಂಡಿ) ಮುನ್ಸೂಚನೆ ವರದಿಯಲ್ಲಿ ತಿಳಿದುಬಂದಿದೆ.
ಕಳೆದ ತಿಂಗಳಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಶೇ.6, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ವಾಡಿಕೆಗಿಂತ ಶೇ.13 ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿತ್ತು. ಇದೀಗ ಪ್ರಸಕ್ತ ತಿಂಗಳಲ್ಲಿ ಆ ಎರಡು ಭಾಗಗಳಲ್ಲಿ ಮತ್ತೆ ಮಳೆ ಕೊರತೆ ಆತಂಕ ಎದುರಾಗಿದೆ.
ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಬೆಂ.ದಕ್ಷಿಣ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗದಲ್ಲಿ ಸೆಪ್ಟೆಂಬರ್ನಲ್ಲಿ ವಾಡಿಕೆ ಅಥವಾ ವಾಡಿಕೆಗಿಂತ ಅಧಿಕವಾಗಿ ಮಳೆ ಬೀಳಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
30ಕ್ಕೆ ಮಾನ್ಸೂನ್ ಕೊನೆ:
ವಾಡಿಕೆಗಿಂತ ಮುನ್ನ ರಾಜ್ಯಕ್ಕೆ ಪ್ರವೇಶಿಸಿದ್ದ ಮಾನ್ಸೂನ್, ಸೆ.30ಕ್ಕೆ ಮುಗಿಯಲಿದೆ. ಜೂ.1ರಿಂದ ಸೆ.7ರವರೆಗೆ ರಾಜ್ಯಾದ್ಯಂತ ವಾಡಿಕೆಯಷ್ಟೇ ಮಳೆ ಸುರಿದಿದೆ. ಆದರೂ, 23 ತಾಲೂಕಿನಲ್ಲಿ ಮಳೆ ಅಭಾವ ಉಂಟಾಗಿದೆ. ಕರಾವಳಿ ಜಿಲ್ಲೆಗಳಲ್ಲಿ 3,000 ಮಿಮೀ, ಮಲೆನಾಡು ಭಾಗದಲ್ಲಿ 1,357 ಮಿಮೀ, ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿ 416 ಮಿಮೀ ಹಾಗೂ ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ 271 ಮಿಮೀ ಮಳೆಯಾಗಿತ್ತು ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹೇಳಿದೆ.