ಇಳಿಕೆಯಾದ ಮಳೆಯ ಅಬ್ಬರ

26MDK05
Published on

ಮಡಿಕೇರಿ:

ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ೮.೩೦ರ ತನಕ ಆರೆಂಜ್ ಅಲರ್ಟ್ ಮುಂದುವರಿಸಲಾಗಿದೆ. ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ಮಳೆಯ ಅಬ್ಬರ ಕಡಿಮೆ ಇತ್ತು. ಮಡಿಕೇರಿ ಸೇರಿದಂತೆ ಹಲವೆಡೆ ಮಧ್ಯೆ ಮಧ್ಯೆ ಕೆಲವು ನಿಮಿಷಗಳ ಅವಧಿಗೆ ದೊಡ್ಡದಾಗಿ ಮಳೆ ಸುರಿದಿದ್ದು ಬಿಟ್ಟರೆ ಸಾಧಾರಣ ಮಳೆ ಮುಂದುವರಿದಿತ್ತು. ಕಾವೇರಿ, ಲಕ್ಷ್ಮಣತೀರ್ಥ ಸೇರಿ ಸೇರಿ ಜಿಲ್ಲೆಯ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಕಡಿಮೆ ಆಗುತ್ತಿದೆ. ಭಾಗಮಂಡಲದಲ್ಲಿ ಸದ್ಯಕ್ಕೆ ಪ್ರವಾಹದ ಆತಂಕ ದೂರವಾಗಿದ್ದು, ಕೆಳಪಾತ್ರದಲ್ಲಿ ನಿಧಾನಕ್ಕೆ ನೀರು ಇಳಿಯುತ್ತಿದೆ.

ಜಿಲ್ಲೆಯಲ್ಲಿ ತಂಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಬುಧವಾರ ಮಳೆಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಎಸ್‌ಪಿ ರಾಮರಾಜನ್ ಮತ್ತಿತರರು ಜತೆಯಲ್ಲಿ ಇದ್ದರು.

ಜಿಲ್ಲೆಯಲ್ಲಿ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೪೮.೫೦ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೩.೯೪ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ೧೪೬೩.೩೩ ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ೧೮೭೭.೭೭ ಮಿ.ಮೀ. ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ೭೪.೨೦ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ೨೮.೫೭ ಮಿ.ಮೀ. ಹಾಗೂ ಸೋಮವಾರಪೇಟೆ ತಾಲೂಕಿ ೪೨.೭೨ ಮಿ.ಮೀ. ಸರಾಸರಿ ಮಳೆಯಾಗಿದೆ.

ಜಿಲ್ಲೆಯಲ್ಲಿ ಹೋಬಳಿವಾರು ಮಡಿಕೇರಿ ಕಸಬಾ ೫೮, ನಾಪೋಕ್ಲು ೩೬.೨೦, ಸಂಪಾಜೆ ೧೪೭, ಭಾಗಮಂಡಲ ೫೫.೬೦, ವಿರಾಜಪೇಟೆ ಕಸಬಾ ೩೮.೨೦, ಹುದಿಕೇರಿ ೩೫.೬೦, ಶ್ರೀಮಂಗಲ ೩೩.೬೦, ಪೊನ್ನಂಪೇಟೆ ೨೦, ಅಮ್ಮತ್ತಿ ೨೪.೫೦, ಬಾಳೆಲೆ ೧೯.೫೦, ಸೋಮವಾರಪೇಟೆ ಕಸಬಾ ೪೭, ಶನಿವಾರಸಂತೆ ೩೦, ಶಾಂತಳ್ಳಿ ೧೦೬.೯೦, ಕೊಡ್ಲಿಪೇಟೆ ೨೩.೨೦, ಕುಶಾಲನಗರ ೨೦.೨೦, ಸುಂಟಿಕೊಪ್ಪ ೨೯ ಮಿ.ಮೀ.ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net